
ಬೀದರ್: ಬಸವಕಲ್ಯಾಣ ತಾಲ್ಲೂಕಿನ ಚಿಕ್ಕನಾಗಾಂವವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಅರ್ಧ ವಾರ್ಷಿಕ ಪರೀಕ್ಷೆಯ ವಿದ್ಯಾರ್ಥಿಗಳ ಕೈ ಬರಹದ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಪ್ರಾಯೋಗಿಕವಾಗಿ ಕೃತಕ ಬುದ್ಧಿ ಮತ್ತೆ (ಎಐ) ಬಳಸಿ ಗಮನ ಸೆಳೆದಿದೆ.
ಮೆರಿಡಿಯನ್ ಗ್ರೇಡರ್ ಎನ್ನುವ ಎಐ ಆಧಾರಿತ ಆಪ್ ಮೂಲಕ ಪ್ರಾಯೋಗಿಕವಾಗಿ ೪ ರಿಂದ ೬ನೇ ತರಗತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದು, ಬಹುತೇಕ ನಿಖರ ಫಲಿತಾಂಶ ನೀಡಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಸಿಮಿಯೋನ್ ಹಾಗೂ ಶಿಕ್ಷಕ ರಾಘವೇಂದ್ರ ತಿಳಿಸಿದ್ದಾರೆ.
ತಮ್ಮ ಕೋರಿಕೆ ಮೇರೆಗೆ ಪ್ರಸ್ತುತ ಹೈದರಾಬಾದನಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಜಿಲ್ಲೆಯವರೇ ಆದ ಸಾಫ್ಟವೇರ್ ಎಂಜಿನಿಯರ್ ಇಮ್ಯಾನುವೆಲ್ ಅವರು ತಮ್ಮ ಸಹ ಪಾಠಿಗಳ ಸಹಯೋಗದಲ್ಲಿ ಮೆರಿಡಿಯನ್ ಗ್ರೇಡರ್ ಹೆಸರಿನ ಆಪ್ ಅಭಿವೃದ್ಧಿಪಡಿಸಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಆಪ್ ಬಳಸಿ ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದೆ. ಮೊದಲು ಸಾಂಪ್ರದಾಯಿಕವಾಗಿ ಮೌಲ್ಯಮಾಪನ ಮಾಡಲಾಗಿತ್ತು. ಬಳಿಕ ಐಎ ಮೂಲಕ ಮಾಡಿದಾಗ ಶೇ ೯೫ ರಿಂದ ಶೇ ೯೮ ರಷ್ಟು ನಿಖರ ಫಲಿತಾಂಶ ಲಭಿಸಿದೆ ಎಂದು ತಿಳಿಸಿದ್ದಾರೆ.
ಈ ಆಪ್‌ನಿಂದ ಮೌಲ್ಯಮಾಪನ ನಿಷ್ಪಕ್ಷಪಾತವಾಗಿ ಆಗಲಿದೆ. ಉತ್ತರ ಪತ್ರಿಕೆ ಮೌಲ್ಯಮಾಪನದ ಶಿಕ್ಷಕರ ಸಮಯದ ಉಳಿತಾಯವಾಗಲಿದೆ. ಶಿಕ್ಷಕರು ಯಾವುದೇ ಒತ್ತಡವಿಲ್ಲದೆ ಮೇಲಿಂದ ಮೇಲೆ ಹೆಚ್ಚಿನ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಿಶೀಲಿಸಬಹುದಾಗಿದೆ ಎಂದು ಹೇಳಿದ್ದಾರೆ.
ಆಪ್ ವಿದ್ಯಾರ್ಥಿಗಳ ಕೈಬರಹದ ಉತ್ತರಗಳನ್ನು ಸ್ವಯಂ ಚಾಲಿತವಾಗಿ ಪರಿಶೀಲಿಸಿ, ಅಂಕ ನೀಡುತ್ತದೆ. ಉತ್ತರ ಸರಿಯಾಗಿದ್ದರೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ತಪ್ಪಾಗಿಸಿದ್ದರೆ ಅದಕ್ಕೆ ಕಾರಣ ಹಾಗೂ ಸುಧಾರಣೆ ಮಾರ್ಗವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಮೌಲ್ಯಮೌಪನ ಮುಗಿದ ತಕ್ಷಣ ವಿದ್ಯಾರ್ಥಿಯ ಅಂಕಪಟ್ಟಿ ಹಾಗೂ ಸುಧಾರಣಾ ವರದಿಯನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದಾದದ್ದು ಆಪ್ ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಯ ಶಿಕ್ಷಕರು ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಪ್ರಾಯೋಗಿಕವಾಗಿ ಆಧುನಿಕ ತಂತ್ರಜ್ಞಾನ ಬಳಸಿದ್ದಕ್ಕೆ ಸಿಆರ್‌ಸಿ ಜಾಕೀರ್ ಹುಸೇನ್, ಎಸ್‌ಡಿಎಂಸಿ ಅಧ್ಯಕ್ಷ ರಾಜಕುಮಾರ ಕಂದಕೂರೆ, ಚಿಕ್ಕನಾಗಾಂವವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಿಂದರ್ ದೇವಬಾ, ಮುಖ್ಯಶಿಕ್ಷಕ ಸಿಮಿಯೋನ್, ಶಿಕ್ಷಕರಾದ ರಾಘವೇಂದ್ರ, ರಾಹುಲ್, ಅಶ್ವಿನಿ ಹಾಗೂ ಗ್ರಾಮದ ಮುಖಂಡ ಪುಂಡಲೀಕ ಗೋರ್ಮಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.























