Home ಮುಖಪುಟ ಸುದ್ದಿ ಚಿನ್ನಕ್ಕಾಗಿ ಭಾರತ- ಪಾಕ್ ಕಾದಾಟ

ಚಿನ್ನಕ್ಕಾಗಿ ಭಾರತ- ಪಾಕ್ ಕಾದಾಟ

ಏಷ್ಯನ್ಸ್ ಕ್ರೀಡಾಕೂಟ

ನಿಶಿನ್, ಅ. ೧- ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ವಿಭಾಗದಲ್ಲಿ ಚಿನ್ನದ ಪದಕಕ್ಕಾಗಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಸೆಣಸಲಿದೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಶ್ರೀಲಂಕಾವನ್ನು ಮಣಿಸಿ ಭಾರತ ಫೈನಲ್‌ಗೆ ಲಗ್ಗೆ ಹಾಕಿತು. ಪಾಕಿಸ್ತಾನ, ಬಾಂಗ್ಲಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.


ಮೊದಲ ಬ್ಯಾಟ್ ಮಾಡಿದ ಭಾರತ ೭ ವಿಕೆಟ್ ನಷ್ಟಕ್ಕೆ ೨೦ ಓವರ್ ಗಳಲ್ಲಿ ೧೭೦ ರನ್ ಗಳಿಸಿತು. ನಿಶಾನ್, ಕಿಶನ್ ೪೬ ಎಸೆತಗಳಲ್ಲಿ ೫ ಸಿಕ್ಸರ್, ೪ ಬೌಂಡರಿಗಳ ನೆರವಿನಿಂದ ಅಜೇಯ ೮೦ ರನ್ ಗಳಿಸುವ ಮೂಲಕ ಲಂಕಾ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು.


ಮತ್ತೊಂದೆಡೆ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ೨೧ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೨ ಸಿಕ್ಸರ್ ನೆರವಿನಿಂದ ೩೮ ರನ್ ಗಳಿಸಿದರು. ಸಂಜು ಸ್ಯಾಮ್‌ಸನ್, ಅಭಿಷೇಕ್ ಶರ್ಮ, ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು.


೧೨೦ ರನ್ ಗಳ ಬೆನ್ನಹತ್ತಿದ ಶ್ರೀಲಂಕಾ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ಕೇವಲ ೯.೫ ಓವರ್ ಗಳಲ್ಲಿ ೪೫ ರನ್ ಗಳಿಗೆ ಸರ್ವಪತನ ಕಂಡು ಸೋಲಿಗೆ ಶರಣಾಯಿತು. ಬೂಮ್ರಾ, ಅಕ್ಷರ್ ಪಟೇಲ್, ಅಭಿಷೇಕ್ ಶರ್ಮ, ತಲಾ ಎರಡು ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು. ಮತ್ತೊಂದೆಡೆ ಪಾಕಿಸ್ತಾನ ಬಾಂಗ್ಲಾದೇಶವನ್ನು ಮಣಿಸಿ, ಫೈನಲ್‌ಗೆ ಪ್ರವೇಶಿಸಿದೆ.


ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ೧೩ ಓವರ್ ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೧೧ ರನ್ ಗಳಿಸಿತು. ಈ ಸವಾಲಿನ ಬೆನ್ನಹತ್ತಿದ ಪಾಕಿಸ್ತಾನ ೧೧.೩ ಓವರ್ ಗಳಲ್ಲಿ ೪ ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಈ ಮೂಲಕ ಪಾಕಿಸ್ತಾನ ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತು. ಮಳೆಯಿಂದಾಗಿ ಪಂದ್ಯವನ್ನು ೧೩ ಓವರ್ ಗಳಿಗೆ ಸೀಮಿತಗೊಳಿಸಲಾಯಿತು.

ನಾಡಿದ್ದು ಫೈನಲ್


ಭಾರತ- ಪಾಕಿಸ್ತಾನ ತಂಡಗಳ ನಡುವಣ ಚಿನ್ನದ ಪದಕಕ್ಕಾಗಿ ಫೈನಲ್ ಪಂದ್ಯ ನಾಡಿದ್ದು ನಡೆಯಲಿದೆ. ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಏಷ್ಯ ಖಂಡದ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.