Home Lead News ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ

ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ

ಬೆಂಗಳೂರು, ಅ. ೧- ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ರಾಜ್ಯ ಚುನಾವಣಾ ಆಯೋಗ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.


ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಅಕ್ರಮಗಳು ನಡೆದಿವೆ. ಫಾರಂ ನಂ. ೭ ಅನ್ನು ಬೇರೆಡೆಯಿಂದ ಮುದ್ರಿಸಿ ತಂದು ಇಲ್ಲಿ ಬಿಎಲ್‌ಓಗಳಿಗೆ ಸಲ್ಲಿಸಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಕ್ರಿಮಿನಲ್ ಪ್ರಕರಣವನ್ನು ಚುನಾವಣಾ ಆಯೋಗ ದಾಖಲಿಸಬೇಕು ಎಂದು ಆಗ್ರಹಿಸಿದರು.


ಫಾರಂ ನಂ. ೭ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ನೂರಾರು ಸಂಖ್ಯೆಯಲ್ಲಿ ನೀಡಲಾಗಿದೆ. ಕೊನೆಯ ೩ ದಿನ ಇರುವಾಗ ಫಾರಂ ನಂ ೭ ಸಲ್ಲಿಕೆಯಾಗಿದೆ. ಇವರಿಗೆ ಇದು ಹೇಗೆ ಸಿಕ್ಕಿತು. ಅಂಕಿ ಅಂಶಗಳನ್ನು ಕೊಟ್ಟವರು ಯಾರು, ಎಲ್ಲದರ ಬಗ್ಗೆಯೂ ತನಿಖೆಯಾಗಬೇಕು. ಚುನಾವಣಾ ಆಯೋಗ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.


ರಾಜ್ಯದ ಮುಖ್ಯಮಂತ್ರಿಯಾಗಿ ಅರ್ಹ ಮತದಾರರನ್ನು ರಕ್ಷಿಸುವುದು ನನ್ನ ಕರ್ತವ್ಯ. ರಾಜ್ಯ ಸರ್ಕಾರವೂ ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಪೊಲೀಸರಿಂದ ತನಿಖೆ ಮಾಡಿಸುತ್ತದೆ. ಜತೆಗೆ ಚುನಾವಣಾ ಆಯೋಗವೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ಧಿಗೋಷ್ಠಿಯ ನಂತರ ರಾಜ್ಯ ಚುನಾವಣಾ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ನಾನು ದೂರು ನೀಡುತ್ತಿದ್ದೇನೆ. ಅವರು ನನ್ನ ದೂರನ್ನು ಸ್ವೀಕರಿಸಿ ಎಸ್‌ಐಆರ್ ಅಕ್ರಮದಲ್ಲಿ ನಡೆದಿರುವ ಕ್ರಿಮಿನಲ್ ಷಡ್ಯಂತ್ರದ ಬಗ್ಗೆ ತನಿಖೆಗೆ ಆದೇಶಿಸುವವರೆಗೂ ಅಲ್ಲಿಂದ ಕದಲುವುದಿಲ್ಲ ಎಂದು ಅವರು ಹೇಳಿದರು.


ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆ ಇದೆ. ಅದು ನನಗೆ ಮುಖ್ಯವಲ್ಲ. ರಾಜ್ಯದ ಅರ್ಹ ಮತದಾರರನ್ನು ರಕ್ಷಿಸುವುದು ನನ್ನ ಕರ್ತವ್ಯ. ಹಾಗಾಗಿ ನಾನು ಸಚಿವ ಸಂಪುಟ ಸಭೆ ಇದ್ದರೂ ರಾಜ್ಯದ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಅಕ್ರಮ ನಡೆಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವವರೆಗೂ ಅಲ್ಲಿಂದ ಬರಲ್ಲ. ನನ್ನ ಜತೆ ಸಚಿವ ಸಂಪುಟದ ಸಹದ್ಯೋಗಿಗಳು ಇರುತ್ತಾರೆ ಎಂದು ಹೇಳಿದರು.


ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವುದಕ್ಕೆ ಅವಕಾಶ ಕೊಡಲ್ಲ. ನಾನು ಕಾನೂನು ಸಲಹೆಯನ್ನು ಪಡೆದುಕೊಳ್ಳುತ್ತೇನೆ. ರಾಜ್ಯ ಸರ್ಕಾರದಿಂದಲೂ ತನಿಖೆ ನಡೆಸುತ್ತೇವೆ. ರಾಜ್ಯದಲ್ಲಿ ಎಸ್‌ಐಆರ್ ಪರಿಷ್ಕರಣೆಯಲ್ಲಿ ದೊಡ್ಡ ಮಟ್ಟದ ಪಿತೂರಿ ನಡೆದಿದೆ ಎಂದು ದೂರಿದರು.


ರಾಜ್ಯದಿಂದಲೇ ಮತಗಳ್ಳತನದ ವಿರುದ್ಧ ಹೋರಾಟ ಆರಂಭವಾಯಿತು. ಈಗ ಅದು ದೇಶವ್ಯಾಪಿ ಆಂದೋಲನವಾಗಿ ನಡೆಯುತ್ತಿದೆ. ಎಸ್‌ಐಆರ್ ಪ್ರಾರಂಭವಾದ ಮೇಲೆ ಸರ್ಕಾರದಿಂದ ಚುನಾವಣಾ ಆಯೋಗಕ್ಕೆ ಸಹಕಾರ, ಪ್ರೋತ್ಸಾಹ ಕೊಟ್ಟಿದ್ದೇವೆ. ಈಗಾಗಲೇ ನಮ್ಮ ಪಕ್ಷದವರು, ಬಿಜೆಪಿ-ಜೆಡಿಎಸ್‌ನವರು ಬಿಎಲ್‌ಎ-೨ ನೇಮಕ ಮಾಡಿದ್ದಾರೆ. ಒಂದು ಕೋಟಿ ಮತ ತೆಗೆದಿದ್ದಾರೆ. ಅರ್ಹ ಮತದಾರರ ಫಾರಂ ೭ ನೀಡಿ ಮತಪಟ್ಟಿಯಿಂದ ಹೆಸರು ತೆಗೆಸಿಕೊಳ್ಳುವ ಕೆಲಸ ನಡೆದಿದೆ. ಬಾಲ್ಕಿ, ನರಸಿಂಹರಾಜ ಸೇರಿ ಹಲವು ಕ್ಷೇತ್ರಗಳಲ್ಲಿ ಈ ರೀತಿ ಅಕ್ರಮಗಳು ನಡೆದಿವೆ. ಬಿಜೆಪಿ ಕಾರ್ಯಕರ್ತರೇ ಫಾರಂ ೭ ಗಳನ್ನು ನೀಡಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಮತಗಳನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.


ಈ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆಯಾಗಲೇ ಬೇಕು. ಈ ಕೆಲಸವನ್ನು ಚುನಾವಣಾ ಆಯೋಗ ಮಾಡಲೇಬೇಕು ಎಂದು ಅವರು ಹೇಳಿದರು.
ಕರ್ನಾಟಕದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಿಂದ ಆರಂಭವಾದ ಹೋರಾಟ ಇದೀಗ ದೇಶವ್ಯಾಪಿ ಚರ್ಚೆಯಾಗಿ ಪರಿಣಮಿಸಿದೆ. ಎಸ್‌ಐಆರ್ ಆರಂಭವಾದಾಗಿನಿಂದ ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಿದೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಬೂತ್ ಮಟ್ಟದ ಏಜೆಂಟ್‌ಗಳನ್ನು (ಬಿಎಲ್‌ಎ) ನೇಮಿಸಿವೆ. ಆದರೆ ಇದೀಗ ಫಾರ್ಮ್-೭ ಮೂಲಕ ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ಕುರಿತು ಗಂಭೀರ ಆರೋಪಗಳು ಕೇಳಿಬರುತ್ತಿವೆ ಎಂದು ಡಿಕೆಶಿ ಹೇಳಿದ್ದಾರೆ.


ಪೂರ್ವಮುದ್ರಿತ ಮತದಾರರ ವಿವರಗಳನ್ನು ಬಳಸಿ ಫಾರ್ಮ್-೭ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಅರ್ಜಿಗಳ ಮೂಲಕ ಅಲ್ಪಸಂಖ್ಯಾತರು, ದಲಿತರು, ಒಬಿಸಿ ಸೇರಿದಂತೆ ವಿವಿಧ ಸಮುದಾಯಗಳ ಮತದಾರರನ್ನು ಗುರಿಯಾಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಭಾಲ್ಕಿ, ನರಸಿಂಹರಾಜ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಈ ರೀತಿಯ ಅರ್ಜಿಗಳು ಸಲ್ಲಿಕೆಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಭಾಲ್ಕಿ ಕ್ಷೇತ್ರವೊಂದರಲ್ಲೇ ಸಾವಿರಾರು ಫಾರ್ಮ್-೭ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಡಿಕೆಶಿ ಉಲ್ಲೇಖಿಸಿದ್ದಾರೆ.
ಮತದಾರರ ವೈಯಕ್ತಿಕ ವಿವರಗಳುಳ್ಳ ಪೂರ್ವಮುದ್ರಿತ ಅರ್ಜಿಗಳು ಸಂಬಂಧಪಟ್ಟವರಿಗೆ ಹೇಗೆ ದೊರಕಿದವು? ಈ ಮಾಹಿತಿಯನ್ನು ಯಾರು ನೀಡಿದ್ದಾರೆ? ಎಂಬ ಪ್ರಶ್ನೆಯನ್ನು ಡಿಕೆ ಶಿವಕುಮಾರ್ ಎತ್ತಿದ್ದಾರೆ.


ಕೆಲವು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಫಾರ್ಮ್-೭ ಮೂಲಕ ಮತದಾರರ ಹೆಸರುಗಳನ್ನು ತೆಗೆಸಲು ಮುಂದಾಗಿದ್ದಾರೆ ಎಂಬುದು ಡಿಕೆಶಿ ಅವರ ಆರೋಪ. ಭಾಲ್ಕಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಇಂತಹ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ಹೇಳಿದ್ದಾರೆ.
ಈ ಆರೋಪಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಾಮೂಹಿಕ ಫಾರ್ಮ್-೭ ಅರ್ಜಿಗಳ ಮೂಲಕ ಮತದಾರರ ಹೆಸರುಗಳನ್ನು ಅಳಿಸುವ ಕುರಿತು ವಿವಿಧೆಡೆ ಆಕ್ಷೇಪಗಳು ವ್ಯಕ್ತವಾಗಿವೆ. ಭಾಲ್ಕಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮತದಾರರ ವಿವರಗಳನ್ನು ಹೊಂದಿರುವ ಅರ್ಜಿಗಳನ್ನು ತಮ್ಮೊಂದಿಗೆ ಯಾವುದೇ ಸಂಬಂಧವಿಲ್ಲದವರು ಸಲ್ಲಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.


ಈ ಬೆಳವಣಿಗೆಗಳ ಕುರಿತು ಚುನಾವಣಾ ಆಯೋಗದ ಮುಂದೆ ದೂರು ಸಲ್ಲಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.