Home ಜಿಲ್ಲೆ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಹೆಸ್ಕಾಂ ಕಚೇರಿ ಮುಂದೆ ಅನಿರ್ದಿಷ್ಟ ಹೋರಾಟ: ಮಲ್ಲಿಕಾರ್ಜುನ ಕೆಂಗನಾಳ ಎಚ್ಚರಿಕೆ

ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಹೆಸ್ಕಾಂ ಕಚೇರಿ ಮುಂದೆ ಅನಿರ್ದಿಷ್ಟ ಹೋರಾಟ: ಮಲ್ಲಿಕಾರ್ಜುನ ಕೆಂಗನಾಳ ಎಚ್ಚರಿಕೆ

ಸಂಜೆವಾಣಿ ವಾರ್ತೆ,
ವಿಜಯಪುರ, ನ. ೩: ರೈತರ ಮನೆಗಳು, ತೋಟದ ಮನೆಗಳು ಹಾಗೂ ಅನುಮತಿಗಾಗಿ ಅರ್ಜಿ ಸಲ್ಲಿಸಿರುವ ಮನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಪಂಪ್‌ಸೆಟ್ ದಂಡ ಹಾಗೂ ವಿದ್ಯುತ್ ಪರಿವರ್ತಕಗಳ ಶುಲ್ಕವನ್ನು ಇಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೆಸ್ಕಾಂ ವಿರುದ್ಧ ಅನಿರ್ದಿಷ್ಟ ಹೋರಾಟ ನಡೆಸುವುದಾಗಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಎಚ್ಚರಿಸಿದರು.
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಸೋಮವಾರ ಹೆಸ್ಕಾಂ ವಿಭಾಗೀಯ ಕಚೇರಿವರೆಗೆ ಪಾದಯಾತ್ರೆ ನಡೆಸಿದ ರೈತ ಭಾರತ ಪಕ್ಷದ ಮುಖಂಡರು, ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಹೆಸ್ಕಾಂ ಎಂಡಿ, ಜಿಎಂ ತಾಂತ್ರಿಕ, ಜಿಎಂ ಆಡಳಿತ, ಆರ್ಥಿಕ ಸಲಹೆಗಾರರು, ಅಧೀಕ್ಷಕ ಅಭಿಯಂತರರು, ಆರ್‌ಎಪಿಡಿಆರ್‌ಪಿ ಹಾಗೂ ಮುಖ್ಯ ವಿದ್ಯುತ್ ಪರಿಶೀಲಕರು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.
ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, “ವಿದ್ಯುತ್ ಸಂಪರ್ಕ ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬರಿಗೂ ಸಂಪರ್ಕ ಕಲ್ಪಿಸುವುದು ಹೆಸ್ಕಾಂನ ಜವಾಬ್ದಾರಿ. ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ನಿಲ್ಲಿಸಿ, ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು” ಎಂದು ಆಗ್ರಹಿಸಿದರು.
ವಿಜಯಪುರ ನಗರದಲ್ಲಿ ಭೂಗತ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗೆ ಆದ್ಯತೆ ನೀಡಬೇಕು. ಗುಂಟಾ ಮನೆಗಳು, ತೋಟದ ಮನೆಗಳು ಹಾಗೂ ಅನುಮತಿಗಾಗಿ ಅರ್ಜಿ ಸಲ್ಲಿಸಿರುವ ಮನೆಗಳಿಗೆ ಹೊಸ ವಿದ್ಯುತ್ ಸಂಪರ್ಕ ನೀಡಬೇಕು. ವಿದ್ಯುತ್ ಇಲಾಖೆಯ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ರೈತರ ಮೇಲಿನ ಆರ್ಥಿಕ ಹೊರೆ ಇಳಿಸಿ

ರೈತರ ಪಂಪ್‌ಸೆಟ್ ದಂಡದ ಮೊತ್ತವನ್ನು ೧೫ ಸಾವಿರದಿಂದ ಶೂನ್ಯಕ್ಕೆ ಇಳಿಸಬೇಕು. ವಿದ್ಯುತ್ ಪರಿವರ್ತಕಗಳ ಫೀ ಅನ್ನು ೩,೧೦೦ರಿಂದ ೧೦,೫೦೦ಕ್ಕೆ ಏರಿಸಿರುವುದನ್ನು ಹಿಂಪಡೆದು ಮತ್ತೆ ೩,೧೦೦ಕ್ಕೆ ನಿಗದಿಪಡಿಸಬೇಕು. ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ನೀತಿಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ರೈತರಿಗೆ ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಹೊಸ ಸಂಪರ್ಕಗಳಿಗೂ ಗೃಹಜ್ಯೋತಿ ಸೌಲಭ್ಯ

೨೦೨೪ರ ಡಿಸೆಂಬರ್ ೧೧ರಿಂದ ಇದುವರೆಗೆ ಹೊಸದಾಗಿ ಪಡೆದಿರುವ ವಿದ್ಯುತ್ ಸಂಪರ್ಕಗಳಿಗೂ ಗೃಹಜ್ಯೋತಿ ಯೋಜನೆಯ ಸೌಲಭ್ಯ ನೀಡಬೇಕು. ಗೃಹಜ್ಯೋತಿ ಯೋಜನೆಯಲ್ಲಿ ೨೦೨೨-೨೩ರ ಸರಾಸರಿ ವಿದ್ಯುತ್ ಬಳಕೆಯನ್ನು ಆಧಾರವಾಗಿಟ್ಟುಕೊಂಡಿರುವ ಕ್ರಮವನ್ನು ಬದಲಿಸಿ, ವರ್ಷದಿಂದ ವರ್ಷಕ್ಕೆ ಸರಾಸರಿ ಯೂನಿಟ್‌ಗಳನ್ನು ಪರಿಷ್ಕರಿಸಬೇಕು ಎಂದು ಕೆಂಗನಾಳ ಒತ್ತಾಯಿಸಿದರು.
ಶಿವಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಸ್ಕಾಂ ಗ್ರಾಮೀಣ ಉಪವಿಭಾಗ ಕಚೇರಿಯನ್ನು ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲವಾಗುವ ಮೂಲ ಸ್ಥಳಕ್ಕೆ ಸ್ಥಳಾಂತರಿಸಬೇಕು. ಸಾಧ್ಯವಾಗದಿದ್ದರೆ ಅಧೀಕ್ಷಕ ಅಭಿಯಂತರರ ಕಚೇರಿ ಆವರಣಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಆನ್‌ಲೈನ್ ಮೂಲಕ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಪಾವತಿಸಿದ ಹಣವನ್ನು ಕಾಮಗಾರಿ ಪೂರ್ಣಗೊಳ್ಳುವವರೆಗೆ ತಡೆಹಿಡಿಯುವ ಕ್ರಮ ಕೈಬಿಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಅರ್ಜಿದಾರರಿಗೆ ಹಣವನ್ನು ಮರಳಿಸಬೇಕು ಎಂದು ಒತ್ತಾಯಿಸಿದರು.
ಹೆಸ್ಕಾಂನಲ್ಲಿ ಅಧಿಕಾರಿಗಳು ಸ್ವಯಂ ಕಾಮಗಾರಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿರಿಯ ಅಧಿಕಾರಿಗಳು ವಿಡಿಯೋ ಸಭೆಗಳಿಗಷ್ಟೇ ಸೀಮಿತವಾಗದೆ ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಬೇಕು. ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನದಲ್ಲಿನ ಲೋಪಗಳನ್ನು ಸರಿಪಡಿಸಿ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಮನವಿ ಮಾಡಿದರು.
ಇಂಧನ ಇಲಾಖೆಯ ನೌಕರರ ಮೆಡಿಕಲ್ ಬಿಲ್, ಲೀವ್ ಸರಂಡರ್ ಹಣ ಹಾಗೂ ವಿದ್ಯುತ್ ಗುತ್ತಿಗೆದಾರರ ಕಾಮಗಾರಿಗಳ ಬಿಲ್‌ಗಳನ್ನು ಶೀಘ್ರ ಪಾವತಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಇಸ್ಮಾಯಿಲ್ ಸುತಾರ, ಶಿವು ಉಪ್ಪಲದಿನ್ನಿ, ಹಾರೂನ್ ಶೇಖ್, ಸಲಾಹುದ್ದೀನ್ ಮನಿಯಾರ್, ರಾಜು ಧುಮಾಲೆ, ಕೆ.ಎಂ. ಹುಂಡೇಕಾರ, ವಿಠ್ಠಲ ಕೊಲಾರ, ಇಮ್ತಿಯಾಜ್ ಶೇಖ್, ಗದಿಗೆಪ್ಪ ವಾಲಿಕಾರ, ಪ್ರತಾಪ ದೊಡ್ಡಮನಿ, ಪ್ರಕಾಶ ನಾಯ್ಕೋಡಿ, ಶಿವು ವಾಗೋಲಿ ಸೇರಿದಂತೆ ರೈತ ಭಾರತ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.