Home ಜಿಲ್ಲೆ ಕಲಬುರಗಿ ದೊಡ್ಡಪ್ಪ ಅಪ್ಪ ಪಿಯು ಕಾಲೇಜಿನಲ್ಲಿ ವಿಜ್ಞಾನ ಉತ್ಸವ-2026 ಉದ್ಘಾಟನೆ

ದೊಡ್ಡಪ್ಪ ಅಪ್ಪ ಪಿಯು ಕಾಲೇಜಿನಲ್ಲಿ ವಿಜ್ಞಾನ ಉತ್ಸವ-2026 ಉದ್ಘಾಟನೆ

ಕಲಬುರಗಿ,ನ.24-ನಗರದ ದೊಡ್ಡಪ್ಪ ಅಪ್ಪ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2026ರ 17ನೇ ವಿಜ್ಞಾನ ಉತ್ಸವವು ಪೂಜ್ಯ ದೊಡ್ಡಪ್ಪ ಅಪ್ಪ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ವಿದ್ಯಾರ್ಥಿಗಳು ರೂಪಿಸಿದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಶಾಸ್ತ್ರದ ಸೃಜನಾತ್ಮಕ ಮಾಡೆಲ್ಗಳನ್ನು ನೋಡಿ ಬೆರಗುಗೊಂಡು ಹರ್ಷ ಚಕಿತರಾದ ಅವರು ವಿದ್ಯಾರ್ಥಿಗಳನ್ನು ಶುಭ ಕೋರಿದರು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಲಕ್ಷ್ಮೀ ಪಾಟೀಲ ಮಾಕಾ ಅವರು ಮಾತನಾಡಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ವಿದ್ಯಾರ್ಥಿಗಳು ಯಥಾವತ್ತಾಗಿ ಅಧ್ಯಯನ ಮಾಡುವುದಕ್ಕಿಂತಲೂ ತಮ್ಮ ಜ್ಞಾನದ ಮೂಸೆಯಲ್ಲಿ ಚಿಂತನೆ ಮಾಡಬೇಕು. ಸೃಜನಾತ್ಮಕ ಸಾಧ್ಯತೆಗಳನ್ನು ಗುರುತಿಸಬೇಕು ಹೊಸ ಹೊಸ ಆವಿಷ್ಕಾರದಡೆಗೆ ಚಿಂತನೆ ಮಾಡಬೇಕು. ಇಂದಿನ ವಿದ್ಯಾರ್ಥಿಗಳಿಗೆ ನಾಳಿನ ನಾಡಿನ ವಿಜ್ಞಾನಿಗಳು ಬೆಳೆಯುವ ಪೈರು ಮೊಳಕೆಯಲ್ಲಿ ನೋಡು ಎಂಬಂತೆ ವಿದ್ಯಾರ್ಥಿಗಳಿಗೆ ವಿಜ್ಞಾನದ ಹೊಸ ಹೊಸ ಮಾಡೆಲ್ ಗಳನ್ನು ರಚಿಸಲು ಪ್ರೇರೇಪಿಸುವುದರ ಮೂಲಕ ಅವರಲ್ಲಿ ಸಂಶೋಧನಾತ್ಮಕ ಮನೋವೃತ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಮಕೃಷ್ಣ ರೆಡ್ಡಿ ಅವರು ಮಾತನಾಡಿ ವಿಜ್ಞಾನ ಪ್ರಶ್ನೆಗಳ ಆಧಾರದ ಮೇಲೆ ನಿಂತಿದೆ. ವಿಜ್ಞಾನದ ವಿಷಯಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಏಕೆ ಹೇಗೆ ಏನು ಎಂಬ ಪ್ರಶ್ನೆಗಳನ್ನು ಎತ್ತಬೇಕು. ಪ್ಲೇಟೋ ಅರಿಸ್ಟಾಟಲ್ ರಂತಹ ತತ್ವಜ್ಞಾನಿಗಳ ಸಿದ್ಧಾಂತಗಳು ಪ್ರಶ್ನೋತ್ತರ ರೂಪದಲ್ಲಿಯೇ ಸೃಷ್ಟಿಯಾಗಿವೆ ವಿಜ್ಞಾನದ ಆವಿಷ್ಕಾರವು ಕುತೂಹಲವನ್ನು ಒಳಗೊಂಡಿದೆ. ಸೃಷ್ಟಿಯನ್ನು ಕುತೂಹಲದಿಂದ ನೋಡುವುದರ ಮೂಲಕ ವಿಜ್ಞಾನದ ಹೊಸ ಆವಿಷ್ಕಾರಗಳು ಹುಟ್ಟುಕೊಳ್ಳುತ್ತವೆ ಎಂದು ನುಡಿದರು.
ಬೆಂಗಳೂರಿನ ಖ್ಯಾತ ಪ್ರೇರಣಾದಾಯಕ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಉಮರಾಣಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಶಿಕ್ಷಣವೆಂದರೆ ಕೇವಲ ಮಾಹಿತಿಗಳ ಹಂಚಿಕೆ ಅಲ್ಲ , ಶಿಕ್ಷಣ ಅಂದರೆ ಕೇವಲ ಉತ್ಪಾದಕರನ್ನು ಗ್ರಾಹಕರನ್ನು ತಯಾರಿಸುವ ಯಂತ್ರವಲ್ಲ. ವಿದ್ಯಾರ್ಥಿಯು ಆತ್ಮಬಲ ಹೆಚ್ಚಿಸಿಕೊಳ್ಳುವ, ತಂದೆ ತಾಯಿಗಳನ್ನು ಪ್ರೀತಿಸುವ, ಸಮಾಜವನ್ನು ಪ್ರೀತಿಸುವ, ದೇಶವನ್ನು ಕಟ್ಟುವ ಶಕ್ತಿ ತುಂಬುವ ಶಿಕ್ಷಣ ಇಂದು ಬೇಕಾಗಿದೆ. ಆತ್ಮಹತ್ಯೆಗೆ ಶರಣಾಗುವ ದುರ್ಬಲ ಮನಸ್ಥಿತಿ ಹೊಂದಿದ ವ್ಯಕ್ತಿಯ ಶಿಕ್ಷಣ ಶಿಕ್ಷಣವೇ ಅಲ್ಲ. ಮಕ್ಕಳು ಕೇಳಿದ್ದೆಲ್ಲ ಕೊಡಿಸಿ ಅತ್ಯಂತ ಸಲುಗೆಯಿಂದ ಬೆಳೆಸಿದರೆ ಅದು ಕೂಡ ಅಪಾಯಕಾರಿಯಾಗಿದೆ. ಜೀವನದಲ್ಲಿ ಅವನು ಬಯಸಿದ್ದು ಸಿಗದಿದ್ದಾಗ ಸಹಿಸಿ ಹೊಂದಾಣಿಕೆ ಮಾಡಿಕೊಳ್ಳದ ಮನೋಭಾವ ಬೆಳೆಸಿದರೆ ಅವನು ಆತ್ಮಹತ್ಯೆ ದಾರಿ ಹಿಡಿಯುವುದಿಲ್ಲ. ಜೀವನದಲ್ಲಿ ಶಾಂತಿಯುತವಾಗಿ ಬದುಕಲು ಕಲಿಸುವ ಶಿಕ್ಷಣದ ಅಗತ್ಯವಿದೆ. ಶಿಕ್ಷಣ ವ್ಯಕ್ತಿಯಲ್ಲಿ ಸತ್ವ , ಚಾರಿತ್ರ್ಯ ಬೆಳೆಸಬೇಕು. ವಿದ್ಯಾರ್ಥಿಗಳಿಗೆ ತಮ್ಮ ಕೆಲಸವನ್ನು ತಾವು ಮಾಡುವ ಹೊಣೆಗಾರಿಕೆ ಕಲಿಸಬೇಕು. ಉತ್ಕøಷ್ಟವಾದ ಮಾನಸಿಕ ಶಕ್ತಿ ಹೊಂದಿದವನು ಬಲಿಷ್ಠ ಶಾರೀರಿಕ ಶಕ್ತಿ ಹೊಂದಲು ಸಾಧ್ಯವಿದೆ. ದೈಹಿಕ ಶ್ರಮ ಕೂಡ ವ್ಯಕ್ತಿಯ ಸದೃಢ ಮನಸ್ಸು ನಿರ್ಮಾಣ ಮಾಡುತ್ತವೆ. ಪರಿಶುದ್ಧ ಮನಸ್ಸಿನಿಂದ ಮಾಡಿದ ಅಡಿಗೆ ಪರಿಶುದ್ಧ ಚಿತ್ತದಿಂದ ಸೇವಿಸಬೇಕು. ಅಪ್ಪ ಮಗನಿಗೆ ಹಣವನ್ನು ಕೊಟ್ಟು ಶಾಲೆಗೆ
ಸೇರಿಸಬಹುದು ಆದರೆ ಜ್ಞಾನ ಆರೋಗ್ಯ, ಮಗನೇ ಸಂಪಾದಿಸಬೇಕು. ಮಕ್ಕಳಿಗೆ ಮನೆ ಕೆಲಸ ಮಾಡುವುದನ್ನು ಕಲಿಸಬೇಕು. ವಿಭಿನ್ನ ಧಾರ್ಮಿಕ ಲಾಂಛನಗಳು ಮುಖ್ಯವಲ್ಲ ,ಬದಲಾಗಿ ಧಾರ್ಮಿಕ ಮಾರ್ಗದಲ್ಲಿ ನಡೆಯಬೇಕು. ತಂದೆ ತಾಯಿಗಳು ಮಕ್ಕಳಿಗೆ ಕಾಲಕಾಲಕ್ಕೆ ನೈತಿಕ ಪಾಠ ಹೇಳಬೇಕು. ಮಕ್ಕಳಿಗೆ ಮೊಬೈಲ್ ಬಳಕೆಯಿಂದ ದೂರವಿಡಬೇಕು . ಮೊಬೈಲ್ ಮಕ್ಕಳ ಭವಿಷ್ಯಕ್ಕೆ ವಿಷಕಾರಿಯಾಗಿದೆ ಎಂದು ಹೇಳಿದರು .
ಪ್ರಾಚಾರ್ಯರಾದ ವಿನೋದಕುಮಾರ ಎಲ್ ಪತಂಗೆ ಅವರು ಉಪಸ್ಥಿತರಿದ್ದರು. ಸಂತೋಷ ಬೋರೋಟಿ ಸ್ವಾಗತಿಸಿದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.