Home ಜಿಲ್ಲೆ ಕಲಬುರಗಿ ಕ-ಕ ಭಾಗದ ಖಾಲಿ ಹುದ್ದೆಗಳ ಭರ್ತಿಗೆ ಧ್ವನಿ ಎತ್ತುವೆ:ಕಮಕನೂರ

ಕ-ಕ ಭಾಗದ ಖಾಲಿ ಹುದ್ದೆಗಳ ಭರ್ತಿಗೆ ಧ್ವನಿ ಎತ್ತುವೆ:ಕಮಕನೂರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ 37 ಸಾವಿರ ವಿವಿಧ ಹುದ್ದೆಗಳನ್ನು ತಕ್ಷಣಕ್ಕೆ ಭರ್ತಿ ಮಾಡುವಂತೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತುವೆ ಎಂದು ವಿಧಾನಪರಿಷತ್ ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದರು.
ಗೃಹ, ಐಟಿ-ಬಿಟಿ, ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರ 48ನೇ ವರ್ಷದ ಜನ್ಮದಿನದ ಅಂಗವಾಗಿ ಮಹೇಂದ್ರ ಫೌಂಡೇಷನ್ ವತಿಯಿಂದ ನಗರದ ಪತ್ರಿಕಾ ಭವನದ ಸಾಂಸ್ಕøತಿಕ ಸಭಾಂಗಣದಲ್ಲಿ ಭಾನುವಾರ ನಡೆದ ಜನಕಲ್ಯಾಣ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಭಾಗಕ್ಕೆ ಮಲತಾಯಿ ಧೋರಣೆ ಆಗಲು ಬಿಡುವುದಿಲ್ಲ, ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಕಲಾಪದಲ್ಲಿ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದರು.
ಸಂವಿಧಾನದ 371 (ಜೆ) ಕಲಂ ತಿದ್ದುಪಡಿ ತರುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಎರಡನೇ ಸಂವಿಧಾನ ಕಲ್ಪಿಸಿಕೊಟ್ಟಿದ್ದು, ಖರ್ಗೆ ಮನೆತನದಿಂದಲೇ ಅಧಿಕಾರ ಸಿಗುತ್ತದೆ. ಆದರೆ ಸ್ಥಾನಮಾನ ಪಡೆದ ಮೇಲೂ ಕೃತಜ್ಞತೆಯಿಂದ ಇರುವುದನ್ನು ಮಾತ್ರ ಮರೆಯುತ್ತಾರೆ ಎಂದ ಕಮಕನೂರ್, 2028 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದರೆ ಸಚಿವ ಪ್ರಿಯಾಂಕ್ ಖರ್ಗೆ ಮುಂದಿನ ಮುಖ್ಯಮಂತ್ರಿ ಆಗುವ ಯೋಗಾಯೋಗವಿದೆ. ಮಾಜಿ ಸಚಿವ ದಿ. ಬಸವಲಿಂಗಪ್ಪ ಅವರಗಿಂತ ಹತ್ತು ಪಟ್ಟು ಹೆಚ್ಚು ಸಾಮಥ್ರ್ಯ, ಎದೆಗಾರಿಕೆ ಪ್ರಿಯಾಂಕ ಖರ್ಗೆ ಅವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೋಷಿತರ ಅಭಿವೃದ್ಧಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ರಾಜ್ಯ ಸರ್ಕಾರಿ, ಎಸ್‍ಸಿ, ಎಸ್‍ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಯೋಜನಾ ಇಲಾಖೆಯ ನಿರ್ದೇಶಕ ಡಿ. ಚಂದ್ರಶೇಖರಯ್ಯ, ಎಸ್‍ಸಿ, ಎಸ್‍ಟಿ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರಗಳು ಕೋಟ್ಯಂತರ ರೂ. ಖರ್ಚು ಮಾಡಿದರೂ ಪ್ರಗತಿ ಸಾಧಿಸುತ್ತಿಲ್ಲ ಏಕೆ? ಇಚ್ಛಾಶಕ್ತಿ ಕೊರತೆಯಿಂದ ಅರ್ಹರಿಗೆ ಯೋಜನೆಗಳು ತಲುಪುತ್ತಿಲ್ಲ. ಶೋಷಿತರು ಮುಖ್ಯವಾಹಿನಿ ಬರಬೇಕಾದರೆ ಗುಣಾತ್ಮಕ ಶಿಕ್ಷಣ, ಒಗ್ಗಟ್ಟು, ಅರಿವು ಹೊಂದಬೇಕು ಎಂದರು. ಯೋಜನಾ ವ್ಯವಸ್ಥೆಗಳಿಂದ ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಶೋಷಿತರ ಅಭಿವೃದ್ಧಿಗೆ ಸಮುದಾಯ ವಿರೋಧಿ ಅಧಿಕಾರಿಗಳಿಂದ ಕಂಟಕವಾಗಿದೆ. ಎಸ್‍ಸಿ, ಎಸ್‍ಟಿ ವರ್ಗಗಳ ಪರ ಆದೇಶಗಳ ಅನುಷ್ಠಾನಕ್ಕೆ ಮೀನಾಮೇಷ ಎಣಿಸಿದರೆ, ಆ ಸಮುದಾಯದ ವಿರೋಧವಾಗಿ ಬರುವ ತೀರ್ಪು, ಆದೇಶಗಳಿದ್ದರೆ ತಕ್ಷಣಕ್ಕೆ ಕಾರ್ಯರೂಪಕ್ಕೆ ತರುವ ಮನಸ್ಥಿತಿವುಳ್ಳ ಅಧಿಕಾರಿ ವರ್ಗ ಹೆಚ್ಚುತ್ತಿದೆ. ಇದರಿಂದ ಶೋಷಿತರ ಕಲ್ಯಾಣವಾಗಲು ಷಡ್ಯಂತ್ರ ರೂಪಿಸಲಾಗುತ್ತಿದ್ದು, ಹೀಗಾಗಿ ಶೋಷಿತರ ಕೈಗಳಿಗೆ ರಾಜಕೀಯ ಅಧಿಕಾರ ಸಿಗಬೇಕಿದೆ ಎಂದರು.
ವೇದಿಕೆಯಲ್ಲಿ ಕೆಕೆಆರ್‍ಟಿಸಿ ವಿಭಾಗೀಯ ಸಂಚಾರಿ ಅಧಿಕಾರಿ ಈಶ್ವರ ಹೊಸಮನಿ, ಕುಡಾ ಮಾಜಿ ಸದಸ್ಯ ಶ್ಯಾಮ್ ನಾಟೀಕಾರ್, ಮಾಜಿ ಉಪಮೇಯರ್ ಬಾಬು ವಂಟಿ, ನಿವೃತ್ತ ಸುಪರಿಡೆಂಟ್ ಇಂಜಿನಿಯರ್ ಸುರೇಶ ಎಲ್. ಶರ್ಮಾ, ಕೆಪಿಸಿಸಿ ವೈದ್ಯಕೀಯ ವಿಭಾಗದ ಡಾ. ಕೃಷ್ಣಮೂರ್ತಿ ಇದ್ದರು. ಇದೇ ವೇಳೆಗೆ ಮಹಾಂಗಾವ್ ಕ್ರಾಸ್ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಸಾಲಿಮನಿ, ಎಂ.ಎಸ್ ಐ ಇರಾಣಿ ಕಾಲೇಜಿನ ಪ್ರಿನ್ಸಿಪಾಲ್ ಐ.ಕೆ. ಪಾಟೀಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಗುರುತಿಸಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಫೌಂಡೇಷನ್ ಅಧ್ಯಕ್ಷೆ ಜ್ಯೋತಿ ಚಂದ್ರಶೇಖರ ದೊಡ್ಡಮನಿ, ಸರ್ಕಾರಿ ಐಟಿಐ ಪುರುಷ ಕಾಲೇಜಿನ ಜೆಟಿಓ ಅನಿಲಕುಮಾರ ಸುಗಂಧಿ, ಕೌಶಲ್ಯ ಮತ್ತು ಔದ್ಯೋಗಿಕ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಬಾಳಿ, ಶೈಕ್ಷಣಿಕ ತಜ್ಞ ಶಿವಾನಂದ ಖಜೂರಿ, ಯಶವಂತ ಶಿಂಧೆ, ಸಿದ್ದಣ್ಣ ಹಾಲಬಾವಿ, ಮಲ್ಲಿಕಾರ್ಜುನ ಅರಬೋಳ, ಬಸಣ್ಣ ಸರ್ಕಾರ ಕೋಳಕೂರ ಮತ್ತಿತರರಿದ್ದರು. ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಶೇಖರ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಪಿಲ್ ನಿರೂಪಿಸಿದರು. ಕಾರ್ಯದರ್ಶಿ ಶರಣಬಸವ ಹೆಗ್ಗೆಡೆ ಸ್ವಾಗತಿಸಿದರು. ಕಾಶಿನಾಥ ಮುಖರ್ಜಿ ವಂದಿಸಿದರು.
……………
2022ರಲ್ಲಿ ಮಹೇಂದ್ರ ಫೌಂಡೇಷನ್ ಅಸ್ತಿತ್ವಕ್ಕೆ ತಂದು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಮಿಷನ್ 2028ರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಈ ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎಂಬ ಜನರ ಇಚ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಖರ್ಗೆಯವರ ಮಾಡಿದ ಕೆಲಸ ಕಾರ್ಯಗಳೇ ಜನಕಲ್ಯಾಣ ಉತ್ಸವವಾಗಲಿವೆ.
-ಡಾ.ಚಂದ್ರಶೇಖರ ದೊಡ್ಡಮನಿ, ಪ್ರಾಂಶುಪಾಲರು, ಸರ್ಕಾರಿ ಸ್ವತಂತ್ರ ಪಿಯು ಕಾಲೇಜು
…………………….
ಇದುವರೆಗೆ ಕೆಕೆಆರ್‍ಡಿಬಿಗೆ ನೀಡಲಾದ ಒಟ್ಟು ಅನುದಾನದಲ್ಲಿ 24 ಸಾವಿರ ಕೋಟಿ ಖರ್ಚಾದರೆ, ವಿಶೇಷ ಯೋಜನೆಗಳಿಗೆ 15 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಸದ್ಯ 34 ಸಾವಿರ ಕೋಟಿ ರೂ. ಖರ್ಚಾದರೂ ಅಭಿವೃದ್ಧಿಯ ವೇಗ ಪಡೆಯುತ್ತಿಲ್ಲ.
-ಡಿ.ಚಂದ್ರಶೇಖರಯ್ಯ, ಯೋಜನಾ ನಿರ್ದೇಶಕರು, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಬೆಂಗಳೂರು