
ಕಲಬುರಗಿ,ನ.21-ಮನೆ ಬೀಗ ಮುರಿದು 1 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ನಗರದ ಶರಣ ಸಿರಸಗಿ ಮಡ್ಡಿಯ ಕ್ಯೂಪಿ ಲೇಔಟ್ನ ನಿಸರ್ಗಾ ಸಿಟಿಯಲ್ಲಿ ನಡೆದಿದೆ.
ಅಶೋಕಕುಮಾರ ಅಣಕಲ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 10 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಗುಂಡಿ, 30 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕರಿಮಣಿ ತಾಳಿ, 10 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಮೂಗುತಿ, 10 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಕಿವಿಯೋಲೆ, 50 ಗ್ರಾಂ.ಬೆಳ್ಳಿ ಕಡಗ, 20 ಗ್ರಾಂ.ನ ಬ್ರಾಸಲೇಟ್, 10 ಗ್ರಾಂ.ನ ಉಂಗುರ, 20 ಗ್ರಾಂ.ನ ಕಾಲುಂಗರ, 40 ಗ್ರಾಂ.ನ ಕಾಲಗೆಜ್ಜೆ, 10 ಗ್ರಾಂ.ಚೈನ್ ಸೇರಿ 20 ಸಾವಿರ ರೂ.ಮೌಲ್ಯದ 150 ಗ್ರಾಂ.ನ ಬೆಳ್ಳಿ ಸಾಮಾನುಗಳು ಮತ್ತು 20 ಸಾವಿರ ರೂ.ನಗದು ಸೇರಿ 1 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಇವರು ತಮ್ಮ ಸ್ವಂತ ಊರಾದ ಕಮಲಾಪುರ ತಾಲ್ಲೂಕಿನ ವಿ.ಕೆ.ಸಲಗರ ಗ್ರಾಮಕ್ಕೆ ತಮ್ಮನ ಮಗಳ ತೊಟ್ಟಿಲು ಕಾರ್ಯಕ್ರಮಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೋದ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.




















