
ಚಿಕ್ಕನಾಯಕನಳ್ಳಿ, ಜೂ. ೨೬- ಗುಣಾತ್ಮಕ ಶಿಕ್ಷಣ ನೀಡುತ್ತಿರುವ ನಮ್ಮ ಕ್ಷೇತ್ರದ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ನಮ್ಮ ಮಕ್ಕಳನ್ನು ಓದಿಸುವ ಮೂಲಕ ಅವರ ಭವಿಷ್ಯ ರೂಪಿಸುವಲ್ಲಿ ಪೋಷಕರು ಮನಸ್ಸು ಮಾಡಬೇಕು ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ಹೇಳಿದರು.
ತಾಲ್ಲೂಕಿನ ವಿವಿಧ ಶಾಲೆಗಳ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ೬೦೦ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದ ತಾಲ್ಲೂಕು ಎಂಬುದನ್ನು ಬದಲಾಯಿಸಲು ಶಿಕ್ಷಣ ಇಲಾಖೆಯು ಉತ್ತಮ ರೀತಿಯಲ್ಲಿ ಪ್ರಯತ್ನ ಮಾಡಿದ್ದು, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ತಾಲ್ಲೂಕಿನಲ್ಲಿ ೪೭ ವಿದ್ಯಾರ್ಥಿಗಳು ೬೦೦ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಫಲಿತಾಂಶ ತಂದಿದ್ದಾರೆ ಎಂದರು. ಕಳೆದೆರಡು ವರ್ಷಗಳಿಂದ ಜಿಲ್ಲೆಗೆ ಪ್ರಥಮವಾಗಿದ್ದ ನಮ್ಮ ತಾಲ್ಲೂಕು ಈ ಬಾರಿ ಗುಣಾತ್ಮಕ ಶಿಕ್ಷಣ ನೀಡುವುದರ ಮೂಲಕ ವಿಷಯ ವಾರು ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಫಲಿತಾಂಶವನ್ನು ಪಡೆದ ಪ್ರಥಮ ತಾಲ್ಲೂಕಾಗಿದೆ ಎಂದು ಅವರು ಹೇಳಿದರು.
ತಾಲ್ಲೂಕಿನಲ್ಲಿ ೪೧ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಬಂದಿದ್ದು ಗ್ರಾಮೀಣ ಮಕ್ಕಳು ಉತ್ತಮ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದಿದ್ದಾರೆ. ಈ ಫಲಿತಾಂಶ ಬರಲು ಬಿ ಇ ಒ ಅವರನ್ನು ಒಳಗೊಂಡಂತೆ ಅವರ ಸಂಪನ್ಮೂಲ ಶಿಕ್ಷಕರ ತಂಡ ತಮ್ಮ ರೀತಿಯ ಕೆಲಸ ಮಾಡಿದೆ. ಇದರೊಂದಿಗೆ ಮಕ್ಕಳ ಪೋಷಕರು ಅವರ ಸಾಧನೆಗೆ ಕಾರಣರಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ನಮ್ಮ ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬೋಧಿಸುವ ಮೂಲಕ ಗುಣಾತ್ಮಕ ಶಿಕ್ಷಣವನ್ನು ಕೊಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಯೋಚಿಸುವುದು ಉತ್ತಮವಾಗಿದೆ ಎಂದರು.
ಬಿಇ ಓ ಕಾಂತರಾಜು ಮಾತನಾಡಿ, ೨೦೨೫-೨೬ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಪಲಿತಾಂಶ ಪಡೆದಿದ್ದು ಎರಡನೇ ಫಲಿತಾಂಶದಲ್ಲಿ ೯೮ ಶೇಕಡ ಫಲಿತಾಂಶ ಪಡೆದಿದ್ದು ಇದಕ್ಕೆ ನಮ್ಮ ಶಾಸಕರು ಸಹಕಾರ ಮುಖ್ಯವಾಗಿದ್ದು ಮಕ್ಕಳಿಗೆ ಪ್ರೇರಣಾ, ಸಂಜೀವಿನಿಯಂತಹ ವಿಶೇಷ ತರಗತಿಗಳು ಮುಖ್ಯವಾಗಿವೆ. ಇದಕ್ಕೆ ನಮ್ಮೆಲ್ಲ ಶಿಕ್ಷಕರೇ ಕಾರಣರಾಗಿದ್ದಾರೆ. ಇದರಲ್ಲೂ ೬೦೦ಕ್ಕೆ ೬೨೨, ೬೨೧, ರಷ್ಟು ಅಂಕಗಳನ್ನು ನಮ್ಮ ಕ್ಷೇತ್ರದ ಮಕ್ಕಳು ಪಡೆದಿದ್ದಾರೆ. ಇಂತಹ ಮಕ್ಕಳಲ್ಲಿ ಇಂದು ೧೨ ಜನ ಮಕ್ಕಳ ಮನೆ ಮನೆಗಳಿಗೆ ತೆರಳಿ ಆ ಮಕ್ಕಳನ್ನು ಅಭಿನಂದಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದು ಇದರಿಂದ ಮಕ್ಕಳಲ್ಲಿ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದರು.
ತಾಲ್ಲೂಕಿನ ಬಾಣದ ದೇವರಹಟ್ಟಿಯ ವೇಣುಶ್ರೀ. ಪಟ್ಟಣದ ಮೋನಿಷ. ಅಭಿನೇಶ್. ಝೆಂಕಾರ ರಾಜು, ಲಿಖಿತ, ಕಂದಿ ಕೆರೆಯ ಶಾಂತ ಲಕ್ಷ್ಮಿ, ಸಾವಶೆಟ್ಟಿಹಳ್ಳಿಯ ಸಮರ್ಥ್. ಮುದ್ದೇನಹಳ್ಳಿಯ ಪೂರ್ವಿಕ, ಹೊಸ ಗೊಲ್ಲರಟ್ಟಿ ಅರ್ಪಿತ, ಪುರದ ಕಟ್ಟೆಯ ಸಿದ್ದರಾಮಯ್ಯಗೌಡ ರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗವಿರಂಗಯ್ಯ. ಗ್ರಾ ಪಂ.ಮಾಜಿ ಅಧ್ಯಕ್ಷ ಪ್ರದೀಪ್. ಮಡಿವಾಳ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗರಾಜು, ಶಿಕ್ಷಕರುಗಳಾದ ಮಲ್ಲಿಕಾರ್ಜುನ್, ಪುಟ್ಟರಾಜು, ನರಸಿಂಹಮೂರ್ತಿ, ಕೇಶವಮೂರ್ತಿ, ಸೇರಿದಂತೆ ಮುಖಂಡರುಗಳಾದ ಸಿ.ಟಿ.ಸುರೇಶ್, ಸಿದ್ದಾರ್ಥ, ಯೋಗೀಶ್, ನಂಜೇಶ್, ಲೋಕೇಶ್, ಗಂಗಾಧರ್, ಪ್ರಸನ್ನ, ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.























