
ಸಂಜೆವಾಣಿ ವಾರ್ತೆ,
ವಿಜಯಪುರ, ನ.೨: ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರದಲ್ಲಿ ಆಗಿರುವ ಪ್ರಗತಿ, ಆಧುನಿಕ ಕೃಷಿ ತಂತ್ರಜ್ಞಾನದ ಅಳವಡಿಕೆ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ರೈತರು ಸಾಧಿಸುತ್ತಿರುವ ಯಶಸ್ಸನ್ನು ಬಿಂಬಿಸುವ ವಿಶೇಷ ಸ್ತಬ್ಧಚಿತ್ರವು ೭೧ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರ ಗಮನ ಸೆಳೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಸಿದ್ಧಪಡಿಸಲಾದ ಈ ಸ್ತಬ್ಧಚಿತ್ರದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳು, ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು, ಏತ ನೀರಾವರಿ ವ್ಯವಸ್ಥೆ ಹಾಗೂ ತೋಟಗಾರಿಕೆ ಬೆಳೆಗಳ ವೈವಿಧ್ಯತೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲಾಯಿತು.
ಪರಮಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ವಿಜಯಪುರದ ಭೂಮಿಗೆ ಸಮರ್ಪಕವಾಗಿ ನೀರು ಒದಗಿಸಿದರೆ ಈ ಪ್ರದೇಶವು ಕ್ಯಾಲಿಫೋರ್ನಿಯಾವನ್ನೂ ಮೀರಿಸುವ ಸಾಮರ್ಥ್ಯ ಹೊಂದಿದೆ ಎಂಬ ಆಶಯ ವ್ಯಕ್ತಪಡಿಸಿದ್ದರು. ಈ ಆಶಯಕ್ಕೆ ಪೂರಕವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರ ಪ್ರಯತ್ನದಿಂದ ಆಧುನಿಕ ತಂತ್ರಜ್ಞಾನ ಬಳಸಿ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೈಗೊಂಡ ನೀರಾವರಿ ಯೋಜನೆಗಳು ಕೃಷಿ ಚಟುವಟಿಕೆಗಳಿಗೆ ಹೊಸ ಉತ್ತೇಜನ ನೀಡಿವೆ.
ವಿಶೇಷವಾಗಿ ತಿಕೋಟಾ ತಾಲೂಕಿನ ಕನಮಡಿ ಸೇರಿದಂತೆ ಎತ್ತರದ ಪ್ರದೇಶಗಳಿಗೂ ಏತ ನೀರಾವರಿ ಮೂಲಕ ನೀರು ತಲುಪಿಸಿರುವುದು ಕೃಷಿ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿದೆ. ಇದರ ಪರಿಣಾಮವಾಗಿ ತಿಕೋಟಾ ಭಾಗದ ರೈತರು ಕೃಷ್ಣವೇಣಿ ಎಫ್ಪಿಒ ಮೂಲಕ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಆರಾ-೩೬ (ಂಖA-೩೬) ದ್ರಾಕ್ಷಿ ತಳಿಯನ್ನು ಸುಮಾರು ೨೦೦ ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಇದರೊಂದಿಗೆ ಸ್ಪೇನ್ ಮೂಲದ ಟ್ಯಾಂಗೋ ಕಿಂಗ್ ಮೋಸಂಬಿ ತಳಿಯನ್ನು ಜಿಲ್ಲೆಯಲ್ಲಿಯೂ ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ.
ಸ್ತಬ್ಧಚಿತ್ರದಲ್ಲಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ರೈತರ ಹೊಲದಲ್ಲಿ ಆರಾ-೩೬ ದ್ರಾಕ್ಷಿ ಹಣ್ಣನ್ನು ಸವಿಯುತ್ತಿರುವ ಚಿತ್ರಣದೊಂದಿಗೆ ಆಧುನಿಕ ನೀರಾವರಿ ವ್ಯವಸ್ಥೆ ಹಾಗೂ ಹೊಸ ತಳಿಗಳ ಕೃಷಿ ಪದ್ಧತಿಯನ್ನು ಪ್ರದರ್ಶಿಸಲಾಗಿದೆ. ನೀರಾವರಿ ಸೌಲಭ್ಯಗಳ ವಿಸ್ತರಣೆಯಿಂದ ಜಿಲ್ಲೆಯ ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ತಳಿಗಳ ಬೆಳೆಗಳತ್ತಲೂ ಆಸಕ್ತಿ ತೋರುತ್ತಿರುವುದನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿದೆ.
ನೀರಾವರಿ ಸೌಲಭ್ಯಗಳ ವಿಸ್ತರಣೆ, ತಂತ್ರಜ್ಞಾನ ಆಧಾರಿತ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದ ಹೊಸ ಬೆಳವಣಿಗೆಗಳನ್ನು ರಾಜ್ಯೋತ್ಸವದ ಸ್ತಬ್ಧಚಿತ್ರವು ಪರಿಚಯಿಸಿದೆ. ಜಿಲ್ಲೆಯ ನೀರಾವರಿ ಪ್ರಗತಿ ಹಾಗೂ ತೋಟಗಾರಿಕೆ ಕ್ಷೇತ್ರದ ಸಾಧನೆಗಳನ್ನು ರಾಜ್ಯೋತ್ಸವದ ಸ್ತಬ್ಧಚಿತ್ರದ ಮೂಲಕ ಬಿಂಬಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ರಾಮಯ್ಯ ಬರಗಿಮಠ ಅವರು ತಿಳಿಸಿದ್ದಾರೆ.





















