Home ಕ್ರೈಂ ಸುದ್ದಿಗಳು ಐದು ಗ್ರಾಂ ಉಂಗುರದ ವಿವಾದಕ್ಕೆ ಎರಡು ಜೀವ ಬಲಿ!ಅಪ್ಪ-ಅಮ್ಮನಿಲ್ಲದೆ ಅನಾಥವಾದ ಎರಡು ಕಂದಮ್ಮಗಳು; ಕುಳಲಿ ಗ್ರಾಮದಲ್ಲಿ...

ಐದು ಗ್ರಾಂ ಉಂಗುರದ ವಿವಾದಕ್ಕೆ ಎರಡು ಜೀವ ಬಲಿ!ಅಪ್ಪ-ಅಮ್ಮನಿಲ್ಲದೆ ಅನಾಥವಾದ ಎರಡು ಕಂದಮ್ಮಗಳು; ಕುಳಲಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ

ಮುಧೋಳ:ಸಣ್ಣಪುಟ್ಟ ಕೌಟುಂಬಿಕ ಮನಸ್ತಾಪವೊಂದು ದುರಂತಕ್ಕೆ ಕಾರಣವಾಗಿ ದಂಪತಿಯ ಸಾವಿನಲ್ಲಿ ಅಂತ್ಯಗೊಂಡ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದಿದೆ. ಅಪ್ಪಾಶಿ ನಡುವಿನಮನಿ ಹಾಗೂ ರಾಜೇಶ್ವರಿ ನಡುವಿನಮನಿ ದಂಪತಿಯ ಸಾವಿನಿಂದ ನಾಲ್ಕು ವರ್ಷದ ಹಾಗೂ 16 ತಿಂಗಳ ಎರಡು ಪುಟ್ಟ ಮಕ್ಕಳು ಪೆÇೀಷಕರನ್ನು ಕಳೆದುಕೊಂಡು ಅನಾಥವಾಗಿವೆ.

ಸುಮಾರು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಅಪ್ಪಾಶಿ ಮತ್ತು ರಾಜೇಶ್ವರಿ ದಂಪತಿ ಕುಟುಂಬದೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಎರಡು ಮುದ್ದಾದ ಮಕ್ಕಳಿದ್ದವು. ಆದರೆ, ಕೆಲವು ತಿಂಗಳ ಹಿಂದೆ ಮನೆಯಲ್ಲಿದ್ದ ಸುಮಾರು ಐದು ಗ್ರಾಂ ತೂಕದ ಚಿನ್ನದ ಉಂಗುರ ಕಾಣೆಯಾಗಿದ್ದ ವಿಚಾರ ಕುಟುಂಬದಲ್ಲಿ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಉಂಗುರ ಕಾಣೆಯಾದ ವಿಚಾರವಾಗಿ ಮನೆಯಲ್ಲಿ ಆಗಾಗ ಅಸಮಾಧಾನ ಹಾಗೂ ವಾಗ್ವಾದ ನಡೆಯುತ್ತಿತ್ತು. ಕುಟುಂಬದ ಹಿರಿಯರು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ, ಹೊಸ ಉಂಗುರ ಮಾಡಿಸಿಕೊಡುವುದಾಗಿ ಸಮಾಧಾನಪಡಿಸಿದ್ದರೂ ಮನಸ್ತಾಪ ಮುಂದುವರಿದಿತ್ತು ಎನ್ನಲಾಗಿದೆ.

ಇತ್ತೀಚೆಗೆ ಇದೇ ವಿಚಾರವಾಗಿ ದಂಪತಿಯ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಮನೆಯ ಹಿರಿಯರು ಮಧ್ಯಸ್ಥಿಕೆ ವಹಿಸಿ ಇಬ್ಬರಿಗೂ ಸಮಾಧಾನ ಹೇಳಿದ್ದರು. ಆದರೆ, ಮರುದಿನ ಬೆಳಗ್ಗೆ ಅಪ್ಪಾಶಿ ಮೃತಪಟ್ಟಿರುವುದು ಕುಟುಂಬಕ್ಕೆ ತೀವ್ರ ಆಘಾತ ತಂದಿದೆ. ಪತಿಯ ಸಾವಿನಿಂದ ಆಘಾತಕ್ಕೊಳಗಾದ ರಾಜೇಶ್ವರಿ ಕೂಡ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಒಂದೇ ಕುಟುಂಬದಲ್ಲಿ ಸಂಭವಿಸಿದ ಈ ಎರಡು ಸಾವುಗಳು ಗ್ರಾಮದಲ್ಲಿ ಶೋಕದ ವಾತಾವರಣ ಮೂಡಿಸಿವೆ. ಕುಟುಂಬದವರು ಹಾಗೂ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ.

ಅನಾಥವಾದ ಎರಡು ಪುಟ್ಟ ಕಂದಮ್ಮಗಳು
ಅಪ್ಪ-ಅಮ್ಮನ ಪ್ರೀತಿ, ಆರೈಕೆ ಹಾಗೂ ಆಸರೆಯಲ್ಲಿ ಬೆಳೆಯಬೇಕಿದ್ದ ನಾಲ್ಕು ವರ್ಷದ ಮಗು ಮತ್ತು 16 ತಿಂಗಳ ಹಸುಗೂಸು ಇದೀಗ ಇಬ್ಬರೂ ಪೆÇೀಷಕರನ್ನು ಕಳೆದುಕೊಂಡಿವೆ. ಬದುಕಿನ ಅರ್ಥವನ್ನೂ ತಿಳಿಯದ ಈ ಕಂದಮ್ಮಗಳ ಭವಿಷ್ಯವನ್ನು ನೆನೆದು ಗ್ರಾಮಸ್ಥರ ಕಣ್ಣಲ್ಲಿ ನೀರು ತುಂಬಿದೆ.

ಕೌಟುಂಬಿಕ ಸಮಸ್ಯೆಗಳು ಹಾಗೂ ಭಿನ್ನಾಭಿಪ್ರಾಯಗಳನ್ನು ಮಾತುಕತೆ, ತಾಳ್ಮೆ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳುವುದು ಅಗತ್ಯ. ಕ್ಷಣಿಕ ಸಂಕಟದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕುಟುಂಬದ ಬದುಕಿನ ಮೇಲೆ ಶಾಶ್ವತ ಪರಿಣಾಮ ಬೀರುತ್ತವೆ ಎಂಬುದನ್ನು ಈ ದುರ್ಘಟನೆ ಮನಕಲಕುವ ರೀತಿಯಲ್ಲಿ ನೆನಪಿಸಿದೆ.