
ಬೀದರ್: ತಾಲೂಕಿನ ಜನವಾಡಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿ ಭಾಗ್ಯವತಿ ಅವರು ಗರ್ಭಿಣಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಹಲವು ಬಾರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜನವಾಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಹಾಗೂ ಸಮಯಕ್ಕೆ ಸರಿಯಾಗಿ ಹೆರಿಗೆ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗಲೂ ಸಮಯೋಚಿತವಾಗಿ ಸೂಕ್ತ ಕ್ರಮ ಕೈಗೊಳ್ಳದೆ, ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ಸಂಘಟನೆಗಳ ಪ್ರಮುಖ ಆರೋಪವಾಗಿದೆ.
ಈ ಕುರಿತು 2025ರ ಅಕ್ಟೋಬರ್ 23ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಡಿಸೆಂಬರ್ 15ರಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು 2026ರ ಜನವರಿ 30ರಂದು ಶುಶ್ರೂಷಕಿಯನ್ನು ವರ್ಗಾವಣೆಗೊಳಿಸಿ ಅಧಿಕೃತ ಜ್ಞಾಪನ ಹೊರಡಿಸಿದ್ದರು. ಆದರೆ, ನಂತರ ಅದೇ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಹಿಂದಿನಿಂದಲೂ ದೂರುಗಳನ್ನು ಸಲ್ಲಿಸುತ್ತಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ನವೆಂಬರ್ 9ರಂದು ಬೀದರ್ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಧರಣಿ ಸತ್ಯಾಗ್ರಹ ನಡೆಸಿದರು.
ಜನವಾಡಾ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಭಾಗ್ಯಲಕ್ಷ್ಮಿ ಅವರನ್ನು ಕೂಡಲೇ ವರ್ಗಾವಣೆಗೊಳಿಸಬೇಕು. ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳ ಕ್ರಮದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಶುಶ್ರೂಷಕಿ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ, ಭಾರತೀಯ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಭೀಮ ಯೋಧ ಸಮಿತಿ, ಮಾದಿಗ ದಂಡೋರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿ ಸಂಘ; ಪ್ರದೀಪ ನಾಟಕರ್, ಯುವ ಘಟಕದ ರಾಜ್ಯಾಧ್ಯಕ್ಷ ಜಿಲ್ಲಾಧ್ಯಕ್ಷ ಲಕ್ಷ್ಮಣ ಎಸ್. ದೇವಕತ್ತೆ, , ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ರವೀಂದ್ರ ಭಂಗೆ, ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷರು ಘಾಳೇಪ್ಪಾ ಬೇಮಳಖೇಡಾ, ರಾಷ್ಟ್ರೀಯ ಭೀಮ ಯೋಧ ಸಮಿತಿ ಜಿಲ್ಲಾಧ್ಯಕ್ಷರು ರಾಜಕುಮಾರ ಪ್ರಸಾದೆ, ಪ್ರೇಮ ಗಾಂವಕರ, ಸುನೀಲ್ ಧರನಾಯಕ, ಪ್ರೀತಮ ದೊಡ್ಡಿ, ಕೃಷ್ಣಾ ಚಿಟ್ಟಾ, ಸಾಲೋಮನ್ ಕಪಲಾಪೂರ, ರಾಬರ್ಟ ಕಪಲಾಪುರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.




















