Home ಮುಖಪುಟ ಸುದ್ದಿ ಖಾಲಿ ನಿವೇಶನ ಸ್ವಚ್ಛತೆ ಅಭಿಯಾನಕ್ಕೆ ಚಾಲನೆ:ಮಾಲೀಕರಿಂದಲೇ ವೆಚ್ಚ ವಸೂಲಿ

ಖಾಲಿ ನಿವೇಶನ ಸ್ವಚ್ಛತೆ ಅಭಿಯಾನಕ್ಕೆ ಚಾಲನೆ:ಮಾಲೀಕರಿಂದಲೇ ವೆಚ್ಚ ವಸೂಲಿ

ಬೆಂಗಳೂರು, ಆ. ೨೭- ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ನಿಟ್ಟಿನಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಅಭಿಯಾನಕ್ಕೆ ಗುರುವಾರ ಅಧಿಕೃತ ಚಾಲನೆ ದೊರೆಯಿತು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರು ವಾರ್ಡ್‌ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.


ನೋಟಿಸ್ ನೀಡಿದರೂ ಸ್ವಚ್ಛಗೊಳಿಸದೇ ಗಿಡಗಂಟಿಗಳು ಬೆಳೆದು ನಿಂತಿದ್ದ ಖಾಲಿ ನಿವೇಶನಕ್ಕೆ ಅಧಿಕಾರಿಗಳು ತೆರಳಿ, ಗೇಟ್ ಬೀಗ ತೆರೆಯಿಸಿ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು. ಸುಮಾರು ೧೦೦ಘಿ೧೦೦ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ನಡೆಸಲಾಯಿತು.

೪೦೦ಕ್ಕೂ ಹೆಚ್ಚು ನಿವೇಶನ ಮಾಲೀಕರಿಗೆ ನೋಟಿಸ್:


ನಗರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈಗಾಗಲೇ ೪೦೦ಕ್ಕೂ ಹೆಚ್ಚು ಖಾಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಮತ್ತು ಎಚ್ಚರಿಕೆಯ ಬಳಿಕವೂ ಸ್ವಚ್ಛತೆ ಮಾಡದ ನಿವೇಶನಗಳನ್ನು ಇನ್ನು ಮುಂದೆ ಜಿಬಿಎ ವತಿಯಿಂದಲೇ ಸ್ವಚ್ಛಗೊಳಿಸಲಾಗುತ್ತದೆ.


ಸ್ವಚ್ಛತಾ ಕಾರ್ಯ ಹಾಗೂ ತ್ಯಾಜ್ಯ ಸಾಗಾಣಿಕೆಗೆ ಆಗುವ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ನಿವೇಶನ ಮಾಲೀಕರಿಂದಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಾಲೀಕರು ವೆಚ್ಚ ಪಾವತಿಸದಿದ್ದರೆ, ಮುಂದಿನ ವರ್ಷ ಕಟ್ಟಡ ತೆರಿಗೆ ವಸೂಲಿ ಸಂದರ್ಭದಲ್ಲಿ ಕ್ಲೀನಿಂಗ್ ಚಾರ್ಜ್ ಅನ್ನು ತೆರಿಗೆಗೆ ಸೇರಿಸಿ ವಸೂಲಿ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ.


ನಿವೇಶನದ ಅಳತೆಗೆ ಅನುಗುಣವಾಗಿ ಶುಲ್ಕ


೨೦೩೦ ಅಡಿ ನಿವೇಶನಕ್ಕೆ ಸ್ವಚ್ಛತಾ ವೆಚ್ಚ ೬,೭೦೦ರಿಂದ ಆರಂಭವಾಗಲಿದ್ದು, ತಡೆಗೋಡೆ ಇದ್ದಲ್ಲಿ ಹೆಚ್ಚುವರಿ ವೆಚ್ಚ ವಿಧಿಸಲಾಗುತ್ತದೆ. ತ್ಯಾಜ್ಯ ಸಾಗಾಣಿಕೆಗೆ ಪ್ರತ್ಯೇಕ ಶುಲ್ಕ ನಿಗದಿಯಾಗಿದೆ. ದೊಡ್ಡ ನಿವೇಶನಗಳಿಗೆ ವೆಚ್ಚವೂ ಹೆಚ್ಚಾಗಲಿದ್ದು, ೫೦೮೦ ಅಡಿ ನಿವೇಶನದ ತ್ಯಾಜ್ಯ ಸಾಗಾಣಿಕೆಗೆ ಬರೋಬ್ಬರಿ ೧.೨೮ ಲಕ್ಷದವರೆಗೆ ವೆಚ್ಚ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳಿಗೆ ಅಳತೆಗೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ.

“ಮೊದಲ ಬಾರಿ ದಂಡವಲ್ಲ, ಕೇವಲ ವೆಚ್ಚ ವಸೂಲಿ” – ಕೃಷ್ಣ ಬೈರೇಗೌಡ:


ಈ ಕುರಿತು ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜುಲೈ ೧೫ರಿಂದ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.


“ನಮ್ಮ ಮನವಿಗೆ ಸ್ಪಂದಿಸಿ ಸಾವಿರಾರು ಜನ ತಮ್ಮ ಸೈಟ್‌ಗಳನ್ನು ಸ್ವಚ್ಛಗೊಳಿಸಿದ್ದಾರೆ. ಅವರಿಗೆ ಧನ್ಯವಾದಗಳು. ಆದರೆ ಪದೇ ಪದೇ ಮನವಿ ಮಾಡಿದರೂ ಹಲವರು ಸ್ವಚ್ಛತೆ ಮಾಡಿಲ್ಲ. ಅವರಿಗೆ ಆಗಸ್ಟ್ ೨೩ರವರೆಗೆ ಸಮಯ ನೀಡಿದ್ದೆವು. ಈಗ ನಾವು ಕೊಟ್ಟ ಮಾತಿನಂತೆ ಸ್ವಚ್ಛಗೊಳಿಸಲು ಮುಂದಾಗಿದ್ದೇವೆ” ಎಂದು ಹೇಳಿದರು.


ನಗರದಾದ್ಯಂತ ಈಗಾಗಲೇ ಸುಮಾರು ೬೭ ಸಾವಿರ ಟನ್ ಡೆಬ್ರಿಸ್ ಮತ್ತು ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಬಿಬಿಎಂಪಿ/ಜಿಬಿಎ, ಬಿಡಿಎ, ಬೆಸ್ಕಾಂ ಮತ್ತು ಮೆಟ್ರೊ ಸೇರಿದಂತೆ ವಿವಿಧ ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿರುವುದಾಗಿ ಹೇಳಿದರು.
ಖಾಲಿ ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾಲೀಕರ ಕರ್ತವ್ಯವಾಗಿದ್ದು, ಇದಕ್ಕೆ *ಜಿಬಿಎ ಕಾಯ್ದೆಯ ಸೆಕ್ಷನ್ ೨೯೦ ಹಾಗೂ ೨೭೪(೧)*ರಲ್ಲಿ ಕಾನೂನು ಅವಕಾಶವಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.


ಮಾಲೀಕರಿಗೆ ಸಚಿವರ ಸಂದೇಶ


“ಸ್ವಚ್ಛತಾ ಶುಲ್ಕ ಜಾಸ್ತಿ ಎಂದು ಅನಿಸಿದರೆ ಜಿಬಿಎ ಸಿಬ್ಬಂದಿ ಬರುವ ಮುನ್ನವೇ ನಿಮ್ಮ ಸೈಟ್ ಅನ್ನು ನೀವೇ ಸ್ವಚ್ಛಗೊಳಿಸಿಕೊಳ್ಳಿ. ನಮಗೂ ತೊಂದರೆ ಬೇಡ, ನಿಮಗೂ ಹೆಚ್ಚುವರಿ ಖರ್ಚು ಬೇಡ. ಮೊದಲ ಬಾರಿಗೆ ದಂಡ ವಿಧಿಸುವುದಿಲ್ಲ, ಸ್ವಚ್ಛತೆಗೆ ಆಗಿರುವ ನಿಜವಾದ ವೆಚ್ಚವನ್ನು ಮಾತ್ರ ಪಡೆಯಲು ಸೂಚಿಸಿದ್ದೇನೆ” ಎಂದು ಕೃಷ್ಣ ಬೈರೇಗೌಡ ಹೇಳಿದರು.


ಒಟ್ಟಿನಲ್ಲಿ…


ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆಸಿ ನಿರ್ಲಕ್ಷ್ಯ ಮಾಡುವ ಮಾಲೀಕರ ವಿರುದ್ಧ ಜಿಬಿಎ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಇಂದಿನಿಂದ ಸ್ವಚ್ಛತೆ ಮಾಡದಿದ್ದರೆ ಜಿಬಿಎಯೇ ಸೈಟ್ ಕ್ಲೀನ್ ಮಾಡಲಿದೆ; ಅದರ ಸಂಪೂರ್ಣ ವೆಚ್ಚ ಮಾಲೀಕರ ಜೇಬಿನಿಂದಲೇ ವಸೂಲಾಗಲಿದೆ. ನಗರ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂಬ ಸಂದೇಶದೊಂದಿಗೆ ಐದು ನಗರ ಪಾಲಿಕೆಗಳಲ್ಲೂ ಅಭಿಯಾನ ಆರಂಭವಾಗಿದೆ.