
ಸಂಸದ ಕೋಟ ನೇತೃತ್ವದ ಸಭೆಯಲ್ಲಿ ಅದಾನಿ ಸಂಸ್ಥೆಯ ಅಧಿಕಾರಿಗಳಿಂದ ಒಪ್ಪಿಗೆ
ಉಡುಪಿ ಜಿಲ್ಲೆಯ ಜನರಿಗೆ ಸುದೀರ್ಘ ಆರೇಳು ವರ್ಷಗಳಿಂದ ಮನೆಮನೆಗೆ ಪೈಪ್ಲೈನ್ ಮೂಲಕ ಗ್ಯಾಸ್ ವಿತರಣೆಯ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅದಾನಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಸಂಸ್ಥೆಯ ಅಧಿಕಾರಿಗಳು ನವೆಂಬರ್ ಮೊದಲ ವಾರದಲ್ಲಿ ಪೈಪ್ಲೈನ್ ಮೂಲಕ ಗ್ಯಾಸ್ ವಿತರಣೆ ಮಾಡುವುದಾಗಿ ಸಭೆಗೆ ತಿಳಿಸಿದರು. ಸುಮಾರು ೨೫,೦೦೦ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪಣಂಬೂರಿನಿಂದ ಕರಾವಳಿ ಜಂಕ್ಷನ್ವರೆಗೆ ಸುಮಾರು ೪೮ ಕಿ.ಮೀ. ಪೈಪ್ಲೈನ್ ವಿಸ್ತರಣೆಯಾಗಿದ್ದು, ಮುಂದುವರಿದು ಕರಾವಳಿ ಜಂಕ್ಷನ್ನಿಂದ ಮಣಿಪಾಲದ ಕಾಯಿನ್ ಸರ್ಕಲ್ವರೆಗೆ ಪೈಪ್ಲೈನ್ ಸಂಪರ್ಕವಾಗಿದ್ದರೂ ವಿಳಂಬ ಧೋರಣೆ ತೋರುವುದು ಅರ್ಥವಿಲ್ಲ. ಆದ್ದರಿಂದ ತಕ್ಷಣ ಮನೆಮನೆಗೆ ಗ್ಯಾಸ್ ವಿತರಣೆ ಆರಂಭಿಸಬೇಕೆಂದು ಒತ್ತಾಯಿಸಿದರು.
ಸುಮಾರು ೨,೦೦೦ ಕುಟುಂಬಗಳಿಗೆ ಮೊದಲ ಹಂತದಲ್ಲಿ ಪೈಪ್ಲೈನ್ ಮೂಲಕ ಗ್ಯಾಸ್ ಹಂಚಿಕೆಗಾಗಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಒಟ್ಟು ೩೦೦ ಕಿ.ಮೀ. ವ್ಯಾಪ್ತಿಯ ಪೈಪ್ಲೈನ್ ವಿತರಣಾ ಜಾಲ ಯೋಜನೆಯ ಗುರಿಯಾಗಿದ್ದು, ಸುಮಾರು ೨೦೦ ಕಿ.ಮೀ.ವರೆಗೆ ಸಂಪರ್ಕ ಕಲ್ಪಿಸಲಾಗಿದೆ.
ಆದರೆ ನಗರಸಭೆ ಅಧಿಕಾರಿಗಳು ಮಳೆಗಾಲದಲ್ಲಿ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಿದ್ದರಿಂದ ಅಕ್ಟೋಬರ್ನಲ್ಲಿ ಕಾಮಗಾರಿ ಆರಂಭಿಸಲು ಹಾಗೂ ನವೆಂಬರ್ ಮೊದಲ ವಾರದಲ್ಲಿ ಮನೆಮನೆಗೆ ಅಡುಗೆ ಗ್ಯಾಸ್ ಸಂಪರ್ಕ ನೀಡಲು ಅದಾನಿ ಸಂಸ್ಥೆಗೆ ತಿಳಿಸಲಾಗಿದೆ. ನಗರಸಭೆಯ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಸಲ್ಲದು. ಸಂಸದರ ಮಾರ್ಗದರ್ಶನದಲ್ಲಿ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಮತ್ತು ನವೆಂಬರ್ ಮೊದಲ ವಾರದಲ್ಲಿ ಗ್ಯಾಸ್ ಸಂಪರ್ಕ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚನೆ ನೀಡಿದರು.
ಈ ಮಧ್ಯೆ ಗೇಲ್ ಸಂಸ್ಥೆಯು ಅನಿಲ ಸರಬರಾಜು ವ್ಯವಸ್ಥೆಯಲ್ಲಿನ ಕಾಮಗಾರಿಯನ್ನು ಪೂರ್ಣಗೊಳಿಸಿರುವುದಾಗಿ ಸಭೆಗೆ ತಿಳಿಸಿತು. ಪಣಂಬೂರಿನಲ್ಲಿ ಗ್ಯಾಸ್ ವಿತರಣಾ ವ್ಯವಸ್ಥೆಯ ಯೋಜನೆಯು ಪೂರ್ಣಗೊಂಡಿರುವುದರಿಂದ ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಸಿಎನ್ಜಿ ವಿತರಣಾ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ಸಿಎನ್ಜಿ ಗ್ಯಾಸ್ ಪೂರೈಸುವ ಬಗ್ಗೆ ಸಭೆಗೆ ತಿಳಿಸಲಾಯಿತು.
ಅಲ್ಲದೆ, ಅರ್ಜಿ ಹಾಕಿರುವ ಇತರ ವಿತರಣಾ ಸಂಸ್ಥೆಗಳಿಗೆ ಗ್ಯಾಸ್ ಸಂಪರ್ಕ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ., ನಗರಸಭೆಯ ಕಾರ್ಯಪಾಲಕ ಅಭಿಯಂತರ ಶ್ರೀ ದುರ್ಗಾಪ್ರಸಾದ್, ಯೋಜನಾ ನಿರ್ದೇಶಕರು ಹಾಗೂ ನಗರಾಭಿವೃದ್ಧಿ ಕೋಶದ ಶ್ರೀ ಸುಬ್ರಹ್ಮಣ್ಯ, ಶ್ರೀ ಪ್ರಿನ್ಸ್ ಲಾರೆನ್ಸ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಗೇಲ್ ಕಂಪನಿ, ಆಹಾರ ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್ ಪ್ರಕಾಶ್ ಉಪಸ್ಥಿತರಿದ್ದರು.































