
ಮೃತರ ಸಂಖ್ಯೆ ೧೭೫ಕ್ಕೇರಿಕೆ
ಕಠ್ಮಂಡು, ಆ. ೨೭- ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಜಲಪ್ರಳಯಕ್ಕೆ ಮೃತಪಟ್ಟವರ ಸಂಖ್ಯೆ ೧೭೫ಕ್ಕೇರಿಕೆ ೩೦೦ ಅಧಿಕ ಭಾರತೀಯರು ಸೇರಿದಂತೆ ೧,೫೦೦ಕ್ಕೂ ಮಂದಿ ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ.
ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಇಂದು ಮಾಹಿತಿ ನೀಡಿ, ಪ್ರವಾಹದಿಂದಾಗಿ ಸುಮಾರು ೮೦೦ ಜನರು ನಾಪತ್ತೆಯಾಗಿದ್ದು, ಇದರಲ್ಲಿ ೩೦೦ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಸಾವು-ನೋವಿನ ಹಾಗೂ ಹಾನಿಯ ಸಂಪೂರ್ಣ ಪ್ರಮಾಣವನ್ನು ಅಂದಾಜಿಸುವ ಕಾರ್ಯ ಇನ್ನೂ ನಡೆಯುತ್ತಿದೆ.
ನಾಪತ್ತೆಯಾದ ಭಾರತೀಯರಲ್ಲಿ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ಕನಿಷ್ಠ ೫೦ ಯಾತ್ರಿಕರು ಸೇರಿದ್ದಾರೆ ಎಂಬುದು ತಿಳಿದುಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೇನ್ ಶಾ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದು, ಭಾರತದಿಂದ ಅಗತ್ಯವಿರುವ ಎಲ್ಲಾ ರಕ್ಷಣೆ ಮತ್ತು ಪರಿಹಾರ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಭಾರತ ಈಗಾಗಲೇ ಹಲವು ಟನ್ ತೂಕದ ವೈದ್ಯಕೀಯ ಮತ್ತು ತುರ್ತು ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ರವಾನಿಸಿದೆ. ಭಾರತದ ತಕ್ಷಣದ ನೆರವಿಗೆ ನೇಪಾಳ ವಿದೇಶಾಂಗ ಸಚಿವರು ಧನ್ಯವಾದ ಅರ್ಪಿಸಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್‍ಯ ಮುಂದುವರಿದಿದ್ದು, ಪರಿಹಾರ ಕಾರ್‍ಯ ಚುರುಕುಗೊಳಿಸಲಾಗಿದೆ.
ಉತ್ತರ ಭಾರತದ ಗಡಿ ರಾಜ್ಯಗಳಲ್ಲಿ ಹೈ ಅಲರ್ಟ್
ನೇಪಾಳದ ಈ ವಿಕೋಪದ ಬೆನ್ನಲ್ಲೇ ಭಾರತದ ಗಡಿ ರಾಜ್ಯಗಳಾದ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನೇಪಾಳದಿಂದ ಹರಿದುಬರುವ ಗಂಡಕ್ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮುಂದಿನ ೨೪ ಗಂಟೆಗಳು ಅತ್ಯಂತ ನಿರ್ಣಾಯಕವಾಗಿವೆ ಎಂದು ಕೇಂದ್ರ ಜಲ ಆಯೋಗ ಎಚ್ಚರಿಸಿದೆ.
ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ ತಂಡಗಳನ್ನು ಗಡಿ ಪ್ರದೇಶದ ನದಿ ಪಾತ್ರಗಳಲ್ಲಿ ನಿಯೋಜಿಸಲಾಗಿದ್ದು, ನಿರಂತರ ಗಸ್ತು ಸಲಾಗುತ್ತಿದೆ.
ಪ್ರವಾಸಿಗರು ಪತ್ತೆಯಿಲ್ಲ!
ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಾಥಮಿಕ ವರದಿಯ ಪ್ರಕಾರ, ನಾಪತ್ತೆಯಾದ ವಿದೇಶಿ ಪ್ರವಾಸಿಗರ ಪೈಕಿ ಕನಿಷ್ಠ ೧೦೫ಕ್ಕೂ ಹೆಚ್ಚು ಭಾರತೀಯರು (ಭಾರತೀಯ ಪೌರರು ಸೇರಿದ್ದಾರೆ. ವಿವಿಧ ಪ್ರವಾಸಿ ಏಜೆನ್ಸಿಗಳ ಮೂಲಕ ಪ್ರಯಾಣಿಸುತ್ತಿದ್ದ ಪ್ರವಾಸಿಗರ ಮಾಹಿತಿ ನೀಡಲಾಗಿದೆ.
ಸಮ್ರಾಟ್ ಟೂರ್ಸ್ & ಟ್ರಾವೆಲ್ಸ್: ೫೯ ಭಾರತೀಯರು ಹಾಗೂ ೧೨ ನೇಪಾಳಿಗರು (ಒಟ್ಟು ೭೧),ಲೀಫ್ ಹಾಲಿಡೇ: ೪೬ ಭಾರತೀಯರು ಹಾಗೂ ೯ ನೇಪಾಳಿಗರು (ಒಟ್ಟು ೫೫) ಹಿಮಾಲಯನ್ ಗ್ಲೇಷಿಯರ್: ೩೭ ಅನಿವಾಸಿ ಭಾರತೀಯರು ಹಾಗೂ ೧೫ ನೇಪಾಳಿಗರು (ಒಟ್ಟು ೫೨)ಫಿಶ್‌ಟೇಲ್ ಟೂರ್ಸ್: ೩ ಅಮೆರಿಕನ್, ೧೭ ಮಲೇಷಿಯನ್ ಹಾಗೂ ೭ ನೇಪಾಳಿಗರು (ಒಟ್ಟು ೨೭)ಆಲ್ಪೈನ್ ಇಕೋ ಟ್ರೆಕ್: ೧೨ ಯುಕೆ, ೪ ದಕ್ಷಿಣ ಆಫ್ರಿಕಾ ಹಾಗೂ ೪ ನೇಪಾಳಿಗರು (ಒಟ್ಟು ೨೦)ಖಠ್ಮಂಡು ಹಾಲಿಡೇ ಟೂರ್ಸ್: ೧ ಆಸ್ಟ್ರೇಲಿಯಾ, ೧ ನೆದರ್‌ಲ್ಯಾಂಡ್ಸ್ ಹಾಗೂ ೧೫ ನೇಪಾಳಿಗರು (ಒಟ್ಟು ೧೭) ಇತರ ಸಂಸ್ಥೆಗಳು: ಕೈಲಾಶ್ ಜರ್ನಿ (೩೧), ಟ್ರೆಕ್ಕರ್ಸ್ ಸೊಸೈಟಿ (೯೨), ರಿಚಾ ಟೂರ್ಸ್ (೧೨) ಹಾಗೂ ಎಕ್ಸ್‌ಪ್ಲೋರ್ ವೇಕೇಷನ್ (೭) ಸಂಸ್ಥೆಗಳ ಮೂಲಕ ತೆರಳಿದ್ದ ಪ್ರವಾಸಿಗರು ಪತ್ತೆಯಾಗಿಲ ಸ್ಥಳೀಯ ಆಡಳಿತ, ಪ್ರವಾಸಿ ಪೋಲಿಸ್ ಮತ್ತು ಭದ್ರತಾ ಸಂಸ್ಥೆಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ನೇಪಾಳ ಸರ್ಕಾರ ತಿಳಿಸಿದೆ.
ತುರ್ತು ನೆರವಿಗೆ ಸಹಾಯವಾಣಿ ಸಂಖ್ಯೆಗಳು
ಉಚಿತ ತುರ್ತು ಸಂಖ್ಯೆ ೧೨೩. ಹಾಟ್‌ಲೈನ್ ಸಂಖ್ಯೆ: ೧೧೪೪ ಪ್ರವಾಸಿ ಪೋಲಿಸ್: ೯೮೫೧೨೮೯೪೪೫ s ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.
ನಾಪತ್ತೆಯಾದವರ ಮಾಹಿತಿ ಸಂಗ್ರಹಕ್ಕೆ ಕೇಂದ್ರ ಸೂಚನೆ
ನೇಪಾಳದಲ್ಲಿ ಸಂಭವಿಸಿದ ದುರಂತದಲ್ಲಿ ನಾಪತ್ತೆಯಾಗಿರುವ ಸಾಧ್ಯತೆಯಿರುವ ಭಾರತೀಯ ನಾಗರಿಕರ ಸಮಗ್ರ ವಿವರಗಳನ್ನು ತಕ್ಷಣವೇ ಸಂಗ್ರಹಿಸುವಂತೆ ಕೇಂದ್ರ ಗೃಹ ಸಚಿವಾಲಯವು ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಅತ್ಯಂತ ತುರ್ತು ಸೂಚನೆ ರವಾನಿಸಿದೆ.
ನೇಪಾಳ ಘಟನೆಯಲ್ಲಿ ಸಿಲುಕಿರುವ ಅಥವಾ ಕಾಣೆಯಾಗಿರುವ ವ್ಯಕ್ತಿಗಳ ಹೆಸರು, ಸಂಪರ್ಕ ಸಂಖ್ಯೆ ಹಾಗೂ ಇತರೆ ಅಗತ್ಯ ವಿವರಗಳನ್ನು ಆದಷ್ಟು ಬೇಗ ಸಂಗ್ರಹಿಸಿ ಖಾಸಗಿ ಸಂದೇಶದ ಮೂಲಕ ರವಾನಿಸುವಂತೆ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗದ ಜಂಟಿ ಕಾರ್ಯದರ್ಶಿ ಮನವಿ ಮಾಡಿದ್ದಾರೆ.ಸಂತ್ರಸ್ತ ಹಾಗೂ ಬಾಧಿತ ಕುಟುಂಬಗಳನ್ನು ಶೀಘ್ರವಾಗಿ ಸಂಪರ್ಕಿಸಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಪ್ರಯತ್ನ ನಡೆಸುತ್ತಿದ್ದು, ರಾಜ್ಯಗಳು ನೀಡುವ ಈ ನಿಖರ ಮಾಹಿತಿ ವಿದೇಶಾಂಗ ಇಲಾಖೆಯ ಕಾರ್ಯಾಚರಣೆಗೆ ಅತ್ಯಂತ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ. ತಮ್ಮ ಕುಟುಂಬದ ಸದಸ್ಯರು ಅಥವಾ ಆಪ್ತರು ನೇಪಾಳದಲ್ಲಿದ್ದು ನಾಪತ್ತೆಯಾಗಿದ್ದರೆ, ತಕ್ಷಣವೇ ಸಂಬಂಧಪಟ್ಟ ರಾಜ್ಯ ಅಥವಾ ಜಿಲ್ಲಾ ಆಡಳಿತವನ್ನು ಸಂಪರ್ಕಿಸಿ ವಿವರಗಳನ್ನು ಒದಗಿಸುವಂತೆ ವಿನಂತಿಸಲಾಗಿದೆ.
ಕಲಬುರಗಿಯ ಕನ್ನಡಿಗರಿಬ್ಬರು ಸುರಕ್ಷಿತ
ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಇಬ್ಬರು ಕನ್ನಡಿಗರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ.
ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಅವರು ಪ್ರವಾಹದಲ್ಲಿ ಸಿಲುಕಿದ್ದರು.ಹೈದರಾಬಾದ್‌ನ ೨೩ ಮಂದಿ ಸೇರಿದಂತೆ ಕಲಬುರಗಿ ಜಿಲ್ಲೆಯ ಇಬ್ಬರು ಸೇರಿ ಒಟ್ಟು ೨೫ ಮಂದಿ ನೇಪಾಳಕ್ಕೆ ಪ್ರವಾಸ ತೆರಳಿದ್ದರು.
ಪ್ರವಾಹದ ಮಾಹಿತಿ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಇಬ್ಬರನ್ನು ಸಂಪರ್ಕಿಸಿ ಅವರ ಸುರಕ್ಷತೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರನ್ನೂ ದೆಹಲಿಗೆ ಸ್ಥಳಾಂತರಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ನೇಪಾಳದಿಂದ ಇಬ್ಬರನ್ನೂ ದೆಹಲಿಗೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಲಿದೆ ಎಂದು ತಿಳಿದುಬಂದಿದೆ.
ನೇಪಾಳದಲ್ಲಿ ಬೆಂಗಳೂರಿನ ೮ ಮಂದಿ: ಪರಂ
ನೇಪಾಳದಲ್ಲಿ ಆಗಿರುವ ದುರಂತದಲ್ಲಿ ಬೆಂಗಳೂರಿನ ೮ ಜನ ಸಿಲುಕಿದ್ದಾರೆ. ಸಾವಿಗೀಡಾದವರ ಮಾಹಿತಿ ಇಲ್ಲ. ಸಿಲುಕಿದವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ ಎಂದು ಡಿಸಿಎಂ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಈ ಮಾಹಿತಿ ನೀಡಿದ್ದಾರೆ. ಸಂಕಷ್ಟದಲ್ಲಿರುವವರ ರಕ್ಷಣೆಗಾಗಿ ಟೂಲ್ ಫ್ರೀ ನಂ. ಕೊಟ್ಟಿದ್ದೇವೆ.
ಸಂಕಷ್ಟಲ್ಲಿರುವವರು ಈ ನಂಬರ್‌ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ೧೦೭೦-೦೮೦೨೨೨೫೩೭೦೭ ಈ ಸಹಾಯವಾಣಿಗೆ ಕರೆ ಮಾಡಿದರೆ ನೆರವು ನೀಡಲಾಗುತ್ತದೆ ಎಂದು ಡಿಸಿಎಂ ಹೇಳಿದ್ದಾರೆ. ರಾಜ್ಯದ ಹಿರಿಯ ಅಧಿಕಾರಿಯನ್ನು ಕಠ್ಮಂಡುಗೆ ಕಳುಹಿಸಲು ಸರ್ಕಾರ ನಿರ್ಧರಿಸಿದೆ. ಚೀನಾದ ರಾಯಭಾರ ಕಚೇರಿ, ಟಿಬೆಟ್ ಪ್ರದೇಶದ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನ ಮಾಡಲಾಗಿದೆ. ಅಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮಗೆ ಅಧಿಕೃತವಾಗಿ ಬಂದ ಮಾಹಿತಿ ನೀಡುತ್ತಿದ್ದೇವೆ. ಸಿಎಂ ಜೊತೆ ಚರ್ಚಿಸಿ ಮಂತ್ರಿಯೊಬ್ಬರನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸಲು ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದರು

































