Home ಜಿಲ್ಲೆ ಕಲಬುರಗಿ ಪುಸ್ತಗಳು ಜೀವನ ರೂಪಿಸುವ ಜೀವಂತ ಜ್ಞಾನ ಮಂದಿರಗಳು

ಪುಸ್ತಗಳು ಜೀವನ ರೂಪಿಸುವ ಜೀವಂತ ಜ್ಞಾನ ಮಂದಿರಗಳು

ಕಲಬುರಗಿ: ಪುಸ್ತಕಗಳು ನಿರ್ಜೀವ ವಸ್ತುಗಳಲ್ಲ. ಅವು ಜೀವನ ರೂಪಿಸುವ ಜೀವಂತ ದೇಗುಲಗಳಿದ್ದಂತೆ. ಪುಸ್ತಕಗಳಿಂದ ಬದುಕು ಹಸನಾಗಿ ಸುಂದರವಾಗಿ ಕಂಗೊಳಿಸಬಲ್ಲದು ಎಂದು ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ
ಪ್ರಾಚಾರ್ಯೆ ಪ್ರೊ. ಇಂದುಮತಿ ದಿವಾಕರ ಅವರ ಮನೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳು ಜ್ಞಾನದ ಕಿಟಕಿಗಳು. ಪುಸ್ತಕಗಳಿಂದ ಮೌಲ್ಯಗಳ ವೃದ್ಧಿಯಾಗಿ ಮನುಕುಲದ ಉಳಿವು ಎಂದು ತಿಳಿಸಿದರು.
ಪುಸ್ತಕಗಳು ಮನಸ್ಸಿನ ಮಲೀನತೆಗೆ ಸಾಣೆ ಹಿಡಿದು ಮೌಢ್ಯವೆಂಬ ಕತ್ತಲೆಯನ್ನು ಓಡಿಸುವ ಅರಿವಿನ ಬೆಳಕು. ಪುಸ್ತಕಗಳಿಂದ ಮಾನವೀಯ ಸಂಬAಧಗಳು ಗಟ್ಟಿಗೊಳ್ಳುತ್ತವೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ದಿವಾಕರ ಎಸ್. ಮಾತನಾಡಿ, ದೇವರು ವಾಸವಿರುವ ಸ್ಥಳ ದೇವಾಲಯ. ಮೃಗಗಳು ವಾಸವಿರುವ ಸ್ಥಳ ಮೃಗಾಲಯ ಎಂದು ಕರೆಯುವಂತೆ ಗ್ರಂಥಗಳಿರುವ ಮನೆಯನ್ನು ಗ್ರಂಥಾಲಯ ಎಂದು ಕರೆಯಲಾಗುತ್ತದೆ ಎಂದರು.

ದೇವಾಲಯಕ್ಕೆ ಹೋಗುವಾಗ ಭಕ್ತಿ, ಆಸೆ ಇರುತ್ತದೆ. ಮೃಗಾಲಯಕ್ಕೆ ಹೋಗುವಾಗ ಭಯ, ಕುತೂಹಲ ಇರುತ್ತದೆ. ಅದೇರೀತಿ ಗ್ರಂಥಾಲಯಕ್ಕೆ ಹೋಗುವಾಗ ಜ್ಞಾನ ಪಡೆದುಕೊಳ್ಳುವ ಆಸೆ ಇರುತ್ತದೆ. ಮಾನವನಾಗಲು ಉತ್ತಮ ಗ್ರಂಥಗಳ ಅಗತ್ಯ ಇರುತ್ತದೆ ಎಂದು ತಿಳಿಸಿದರು.
ಡಾ. ಶ್ರೀಶೈಲ ಮಸೂತೆ, ನೀತಾಸಿಂಗ್, ಲತಾ ಕವಳೆ, ಗೀತಾ ಕುಂಬಾರ, . ಡಾ. ಮಹೇಶ ಗಂವ್ಹಾರ, ರೇವಣಸಿದ್ದಪ್ಪ ದುಖಾನ್, ಡಾ. ಲಕ್ಷ್ಮಣ ಕವಳೆ, ಸಂಗಣ್ಣ ಬಿರಾದಾರ ಸೇರಿದಂತೆ ಅನೇಕರಿದ್ದರು.
ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು. ಜಾಗೃತಿ ಸಮಿತಿ ಸದಸ್ಯ ಡಾ. ನಾಗಪ್ಪ ಗೋಗಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕಿಡಾ. ಶೋಭಾದೇವಿ ಚಕ್ಕಿ ನಿರೂಪಿಸಿದರು. ಪ್ರೊ. ಇಂದುಮತಿ ಪಾಟೀಲ ವಂದಿಸಿದರು.