
ಸಿರಾ, ಅ. ೧೦- ಅಪ್ಪರ್ ಭದ್ರ ನೀರಾವರಿ ಯೋಜನೆ ಸೌಲಭ್ಯ ಪಡೆಯಬೇಕೆಂಬ ಇಚ್ಛಾಶಕ್ತಿಯ ಹೋರಾಟದ ಜತೆಗೆ ನಾವೆಲ್ಲರೂ ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್. ಶಶಿಧರ್ಗೌಡ ಹೇಳಿದರು.
ತಾಲ್ಲೂಕಿನ ಗೌಡಗೆರೆ ಹೋಬಳಿಯ ಭೂತಪ್ಪನಗುಡಿ ಎಸ್ಎಂಆರ್ ಪ್ರೌಢಶಾಲೆ ಆವರಣದಲ್ಲಿ ಜೀವನಕ್ಕಾಗಿ ನೀರು, ನೀರಿಗಾಗಿ ನಮ್ಮ ಹೋರಾಟ ಎಂಬ ಧ್ಯೇಯ ವಾಕ್ಯದ ಗೌಡಗೆರೆ ಹೋಬಳಿಯ ಭದ್ರ ಮೇಲ್ದಂಡೆ ಯೋಜನೆ ಹೋರಾಟ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮದಲ್ಲಿ ಪ್ರತಿಯೊಬ್ಬ ರೈತ ನೀರಿಗಾಗಿ ಹಕ್ಕೋತಾಯ ಮಾಡುವಂತಹ ಮನೋಭಾವವನ್ನು ಬೆಳೆಸಿಕೊಂಡು ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಹೋರಾಟದ ಕಿಚ್ಚು ಪ್ರತಿಯೊಬ್ಬ ರೈತರಲ್ಲಿ ಬರಬೇಕು. ಅಪ್ಪರ್ ಭದ್ರ ನೀರಾವರಿ ಯೋಜನೆಯ ತುಮಕೂರು ನಾಲೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವ ಅವಶ್ಯಕತೆ ಇದೆ. ಸಿರಾ ನಗರದಲ್ಲಿ ನೀರಿಗಾಗಿ ಸಾವಿರಾರು ರೈತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಅವಶ್ಯಕತೆ ಇದೆ ಎಂದರು.
ನೀರಾವರಿ ಹೋರಾಟಗಾರ ಗೋಮಾರದನಹಳ್ಳಿ ಮಂಜುನಾಥ್ ಮಾತನಾಡಿ, ಗೌಡಗೆರೆ ಹೋಬಳಿ ನೀರಾವರಿ ವಿಚಾರದಲ್ಲಿ ನಿರಂತರವಾಗಿ ಅನ್ಯಾಯಕ್ಕೆ ಒಳಪಡುತ್ತಿದೆ. ಗೌಡಗೆರೆ ಹೋಬಳಿ ವ್ಯಾಪ್ತಿಯಲ್ಲಿ ಪ್ರಸ್ತುತ ಅಂತರ್ಜಲ ತೀವ್ರ ಕುಸಿತ ಕಂಡಿದ್ದು ಕುಡಿಯುವ ನೀರಿಗೂ ಹಾಹಾಕಾರ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಕ್ಕದ ಚಿಕ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರೈತರು ಹೋರಾಟದ ಮೂಲಕ ಭದ್ರ ನೀರನ್ನು ಪಡೆದಿದ್ದಾರೆ. ಸಿರಾ ತಾಲ್ಲೂಕಿನಲ್ಲಿ ನೀರಾವರಿ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ರೈತರು ಹೋರಾಟಗಾರರೊಂದಿಗೆ ಸಹಕರಿಸಿ ಹೋರಾಟಕ್ಕೆ ಬಲ ನೀಡಿದಾಗ ಮಾತ್ರ ದೊಡ್ಡ ಹೋರಾಟ ನಡೆಯಲಿದೆ. ಈ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ ರಾಜ್ಯದ ಗಮನಸೆಳೆಯುವಂತಹ ಪ್ರತಿಭಟನೆಯನ್ನು ಸಿರಾದಲ್ಲಿ ಮಾಡೋಣ ಎಂದರು.
ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಮಾತನಾಡಿ, ಅಪ್ಪರ್ ಭದ್ರ ನೀರಾವರಿ ತುಮಕೂರು ನಾಲೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ರಾಜಕಾರಣಿಗಳ ನಿರ್ಲಕ್ಷ ಧೋರಣೆಯೇ ಕಾರಣ. ಕೇಂದ್ರ ಸರ್ಕಾರ ಅಪ್ಪರ ಭದ್ರಾ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಬಾಕಿ ಉಳಿದಿರುವ ೫೩೦೦ ಕೋಟಿ ರೂಪಾಯಿ ಅನುದಾನ ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಯೋಜನೆಯಿಂದ ಸಿರಾ ತಾಲ್ಲೂಕಿನ ೬೩ ಕೆರೆಗಳಿಗೆ ನೀರು ಸಿಗಲಿದ್ದು, ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಈ ನಿಟ್ಟಿನಲ್ಲಿ ಸಿರಾ ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಗಳಲ್ಲಿ ಹೋರಾಟದ ಪೂರ್ವಭಾವಿ ಸಭೆಗಳನ್ನು ಪೂರ್ಣಗೊಳಿಸಿದ್ದೇವೆ. ಸಾವಿರಾರು ರೈತರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಅತಿ ಶೀಘ್ರದಲ್ಲಿಯೇ ಸಿರಾದಲ್ಲಿ ರಾಜ್ಯದ ಗಮನಸೆಳೆಯುವಂತಹ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ನೀರು ತಾಲ್ಲೂಕಿನ ಕೆರೆಗಳಿಗೆ ಹರಿಸುವುದೇ ನಮ್ಮ ಸಂಕಲ್ಪ, ಯುವಶಕ್ತಿ ಕೂಡಾ ಈ ನೀರಾವರಿ ಹೋರಾಟಕ್ಕೆ ಕೈಜೋಡಿಸಬೇಕು ಎಂದರು.
ಸಭೆಯಲ್ಲಿ ರೈತ ಮುಖಂಡರಾದ ಡಿ. ತಿಮ್ಮಯ್ಯ, ಅಕ್ಕಮಹಾದೇವಿ ಮಹಾವಿದ್ಯಾಲಯದ ರಂಗನಾಥ್, ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ಬರಗೂರು ಬಪ್ಪಣ್ಣ, ಜಯರಾಮಯ್ಯ, ಶ್ರೀಕಂಠಪ್ಪ, ಬಿ.ವಿ. ಗುಂಡಪ್ಪ, ಶಿವು ಸ್ನೇಹಪ್ರಿಯ, ಗೌಡಗೆರೆ ವೆಂಕಟೇಶ್, ನೇರಲಗುಡ್ಡ ಶಿವಕುಮಾರ್, ಹೊನ್ನೇನಹಳ್ಳಿ ಶಾಂತರಾಜು, ಸಂತೋಷ್, ಹನುಮಂತರಾಯಪ್ಪ, ಜೆ ಹೊಸಹಳ್ಳಿ ತಿಪ್ಪೇಸ್ವಾಮಿ, ಮಹಾಂತೇಶ್, ವೀರಪುರ ರಾಮಣ್ಣ, ಧನಂಜಯ, ಶಿವಕುಮಾರ ನಾಯಕ, ಜಯಣ್ಣ, ರಾಮಣ್ಣ, ಹನುಮಂತ ರಾಯಪ್ಪ, ದೇವರಾಜ್ ಸೇರಿದಂತೆ ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಯ ನೀರಾವರಿ ಹೋರಾಟ ಗಾರ ರೈತರು ಪಾಲ್ಗೊಂಡಿದ್ದರು.


























