Home ಮುಖಪುಟ ಸುದ್ದಿ ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಗಜಪಡೆಯ ಹೆಮ್ಮೆಯ ‘ಪ್ರಶಾಂತ್’ ಆನೆ ಆಯ್ಕೆ

ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಗಜಪಡೆಯ ಹೆಮ್ಮೆಯ ‘ಪ್ರಶಾಂತ್’ ಆನೆ ಆಯ್ಕೆ

ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ ಗಜಪಡೆಯ ಅನುಭವಿ ‘ಪ್ರಶಾಂತ್’ – ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ.

ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಪ್ರಧಾನ ಗಜಪಡೆಯ ನಾಯಕನಾಗಿ 54 ವರ್ಷ ವಯಸ್ಸಿನ ಅನುಭವಿ ‘ಪ್ರಶಾಂತ್’ ಆನೆಯನ್ನು ಆಯ್ಕೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಮೈಸೂರು ಅರಮನೆ ಮಂಡಳಿಯಲ್ಲಿ ನಡೆದ ಉನ್ನತ ಮಟ್ಟದ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಅಧಿಕೃತವಾಗಿ ಹಂಚಿಕೊಂಡ ಸಚಿವರು ಕಳೆದ 18 ವರ್ಷಗಳಿಂದ ನಿರಂತರವಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಪ್ರಶಾಂತ್, ತನ್ನ ಶಾಂತ ಸ್ವಭಾವ ಮತ್ತು ಅಪ್ರತಿಮ ಅನುಭವದಿಂದ ಈ ಗೌರವಕ್ಕೆ ಪಾತ್ರನಾಗಿದ್ದಾನೆ ಎಂದು ತಿಳಿಸಿದರು.

ಆನೆಯ ದಸರಾ ಅನುಭವ, ಅಂಬಾರಿ ಹೊರುವುದಕ್ಕೆ ಅತ್ಯಂತ ತಕ್ಕುದಾದ ಬೆನ್ನಿನ ರಚನೆ, ತರಬೇತಿ ಶಿಬಿರದಲ್ಲಿ ಸಾಬೀತಾದ ಭಾರ ಹೊರುವ ಸಾಮರ್ಥ್ಯ, ಗಜಪಡೆಯ ಸಂಚಾರದಲ್ಲಿನ ಶಾಂತ ಸ್ವಭಾವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಾವುತರು ಹಾಗೂ ಕಾವಾಡಿಗರ ನಿಯಂತ್ರಣಕ್ಕೆ ತಕ್ಷಣ ಸ್ಪಂದಿಸುವ ಗುಣವನ್ನು ಕೂಲಂಕಷವಾಗಿ ಮತ್ತು ವೈಜ್ಞಾನಿಕವಾಗಿ ಪರಿಶೀಲಿಸಿ ಈ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ದಸರಾ ಗಜಪಡೆಯ ಎಲ್ಲಾ ಆನೆಗಳ ಆರೋಗ್ಯ ಮತ್ತು ಸುರಕ್ಷತೆಗೆ ರಾಜ್ಯ ಸರ್ಕಾರದಿಂದ ಅತ್ಯುನ್ನತ ಆದ್ಯತೆ ನೀಡಲಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಸೂಕ್ತ ವಿಶ್ರಾಂತಿ, ಪೌಷ್ಟಿಕ ಆಹಾರ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಯಾವುದೇ ತುರ್ತು ಸಂದರ್ಭಕ್ಕಾಗಿ ಮೀಸಲು ಆನೆಯಾಗಿ ಧನಂಜಯ ಆನೆಯನ್ನು ನಿಯೋಜಿಸಲಾಗಿದೆ, ​ಗಜಪಡೆಯ ಮುಂಚೂಣಿಯಲ್ಲಿ ಸಾಗುವ ನಿಶಾನೆ ಆನೆಯಾಗಿ ಅಭಿಮನ್ಯು, ನೌಪತ್ ಆನೆಯಾಗಿ ಗೋಪಿ ಹಾಗೂ ಅಂಬಾರಿ ಆನೆಗೆ ಬೆಂಬಲವಾಗಿ ಸಾಗುವ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪ ಪಾಲ್ಗೊಳ್ಳಲಿವೆ.
​ಇವುಗಳೊಂದಿಗೆ ಸಾಲಾನೆ ತಂಡದಲ್ಲಿ ಏಕಲವ್ಯ, ಸುಗ್ರೀವ, ಲಕ್ಷ್ಮೀ, ಶ್ರೀಕಂಠ, ಶ್ರೀರಾಮ ಮತ್ತು ಮಹೇಂದ್ರ ಆನೆಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಲಿವೆ ಎಂದು ಸಚಿವರು ಮಾಹಿತಿ ಹಂಚಿಕೊಂಡರು.

ಈ ಬಾರಿಯ ದಸರಾ ಮಹೋತ್ಸವಕ್ಕೆ ಕೇರಳ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಅತಿಥಿಗಳಾಗಿ ಆಗಮಿಸಲು ಸಮ್ಮತಿ ಸೂಚಿಸಿದ್ದಾರೆ, ಇದರೊಂದಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುಮಾರು 40 ಜನ ಪ್ರಸಿದ್ಧ ಸಿನಿಮಾ ಕಲಾವಿದರು ದಸರಾಗೆ ಆಗಮಿಸುವ ಸಾಧ್ಯತೆಯಿದ್ದು, ನಾಡಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಇದೇ ವೇಳೆ, ಜಂಬೂಸವಾರಿಯಲ್ಲಿ ಅಂಬಾರಿ ಹೊರಲಿರುವ ಗಜಪಡೆಯ ಹೆಮ್ಮೆಯ ಆನೆ ‘ಪ್ರಶಾಂತ್’ ಆಯ್ಕೆಯನ್ನು ಅಧಿಕೃತವಾಗಿ ಸಾರುವ ವಿಶೇಷ ಬಿತ್ತಿಚಿತ್ರವನ್ನು ಗಣ್ಯರು ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವರಾದ ಶ್ರೀ ಕೆ.ಎಸ್. ಬಸವಂತಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿಗಳಾದ ಶ್ರೀ ಲಕ್ಷ್ಮೀಕಾಂತರೆಡ್ಡಿ.ಜಿ, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಭುಗೌಡ ಐ.ಬಿ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕರಾದ ಶ್ರೀ ಟಿ.ಎಸ್. ಸುಬ್ರಮಣ್ಯ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.