
ಕಲಬುರಗಿ,ಅ.14-ಇಂಟರ್ನೆಟ್ ಕಸ್ಟಮರ್ ಕೇರ್ ಎಂದು ನಂಬಿಸಿ, ನಿಮ್ಮ ಮನೆಗೆ ಅಳವಡಿಸಿರುವ ಇಂಟರ್ನೆಟ್ ಸ್ಪೀಡ್ ಮಾಡುತ್ತೇನೆ ಎಂದು ಸುಳ್ಳು ಹೇಳಿ ವ್ಯಕ್ತಿಯೊಬ್ಬರಿಗೆ 1,04,000 ರೂ.ಆನ್ಲೈನ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ರವಿಕುಮಾರ ರುದ್ರ ಎಂಬುವವರೆ ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ರವಿಕುಮಾರ ರುದ್ರ ಅವರು ತಮ್ಮ ಮನೆಯಲ್ಲಿ ಇಂಟರ್ನೆಟ್ ಬಳಕೆಗಾಗಿ ಇಂಟರ್ನೆಟ್ ಅಳವಡಿಸಿದ್ದಾರೆ. ಅದನ್ನು ಎರಡು ವರ್ಷಗಳಿಂದ ಬಳಕೆ ಮಾಡುತ್ತ ಬಂದಿದ್ದು, ಇಂಟರ್ನೆಟ್ ಸ್ಲೋ ಆಗಿದ್ದರಿಂದ ಅಂತರ್ಜಾಲದಲ್ಲಿ ಇಂಟರ್ನೆಟ್ ಕಸ್ಟಮರ್ ಫೋನ್ ನಂಬರ್ ಸರ್ಚ್ ಮಾಡಿದ್ದಾರೆ. ಅಂತರ್ಜಾಲದಲ್ಲಿ ರಾಹುಲ್ ಎಂಬಾತನ ಮೊಬೈಲ್ ನಂಬರ್ ಬಂದಿದ್ದು, ಆ ನಂಬರ್ ಕರೆ ಮಾಡಿ ಮನೆಯಲ್ಲಿರುವ ಇಂಟರ್ನೆಟ್ ಸ್ಲೋ ಆಗಿದ್ದು, ಯಾರಾದರೂ ಟೆಕ್ನಿಷಿಯನ್ ಇದ್ದರೆ ಕಳುಹಿಸಿ ಎಂದು ಕೇಳಿಕೊಂಡಿದ್ದಾರೆ. ಆಗ ಆತ ನಾನು ಆನ್ಲೈನ್ನಲ್ಲಿಯೇ ನಿಮ್ಮ ಮನೆಯಲ್ಲಿರುವ ಇಂmರ್ನೆಟ್ ಸ್ಪೀಡ್ ಮಾಡುತ್ತೇನೆ ಎಂದು ಸುಳ್ಳು ಹೇಳಿ ಇವರ ವ್ಯಾಟ್ಸಪ್ಗೆ ಕಸ್ಟಮರ್ ಸಪೋರ್ಟ್ (1).ಎಪಿಕೆ ಲಿಂಕ್ ಕಳುಹಿಸಿದ್ದಾನೆ. ಇವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದರ ವ್ಯಾಟ್ಸಪ್ ಸ್ಕ್ರೀನ್ ಶೇರ್ ಮಾಡಿಕೊಂಡು ಆತ ತಿಳಿಸಿದಂತೆ ಮೊಬೈಲ್ನಲ್ಲಿ ಟೈಪ್ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಇವರ ಫೋನ್ ಸ್ಕ್ರೀನ್ ಮೇಲೆ ಅಪಡೇಟ್ ಅಂತ ಬಂದಿದೆ. ಆಗ ವಂಚಕ ಸದ್ಯ ಇಂಟರ್ನೆಟ್ ಸ್ಲೋ ಆಗಿದ್ದು, ಇಂಟರ್ನೆಟ್ ಬದಲಾವಣೆ ಮಾಡುತ್ತೇನೆ ನಿಮ್ಮ ಇಂಟರ್ನೆಟ್ ಸ್ಪೀಡ್ ಆಗುತ್ತದೆ ಅದಕ್ಕೆ ಇನ್ನೊಂದು ನಂಬರ್ ಕೊಡಿ ಎಂದು ಕೇಳಿದ್ದಾನೆ. ಆಗ ರವಿಕುಮಾರ ಅವರು ತಮ್ಮ ಪತ್ನಿಯ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಆಗ ವಂಚಕ ಈ ಮೊಬೈಲ್ ನಂಬರ್ಗೆ ಕಸ್ಟಮರ್ ಸಪೋರ್ಟ್ (1).ಎಪಿಕೆ ಲಿಂಕ್ ಕಳುಹಿಸಿ ತಾನು ಹೇಳಿದಂತೆ ಪ್ರೊಸೆಸ್ ಮಾಡಲು ರವಿಕುಮಾರ ಅವರಿಗೆ ಹೇಳಿದ್ದಾನೆ. ರವಿಕುಮಾರ ಅವರಿಗೆ ವಂಚಕನ ಮೇಲೆ ಅನುಮಾನ ಬಂದು ಅವರ ಖಾತೆಗೆ ಲಿಂಕ್ ಹೊಂದಿರುವ ಫೋನ್ ಪೇಯಲ್ಲಿ ಚೆಕ್ ಮಾಡಿದ್ದಾರೆ. ವಂಚಕ ರವಿಕುಮಾರ ಅವರ ಬ್ಯಾಂಕ್ ಖಾತೆಯಿಂದ 25 ಸಾವಿರ, ಇನ್ನೊಂದು ಬ್ಯಾಂಕ್ ಖಾತೆಯಿಂದ 99 ಸಾವಿರ ಮತ್ತು ಮೊತ್ತೊಂದು ಬ್ಯಾಂಕ್ ಖಾತೆಯಿಂದ 5 ಸಾವಿರ ಸೇರಿ 1,04,000 ಲಕ್ಷ ರೂ.ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
























