
ಅಫಜಲಪುರ: ಎರಡು ದಶಕಗಳ ಕಾಲ ಗ್ರಾಮೀಣ ಜನರ ಆರೋಗ್ಯ ಸೇವೆಯಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡು, ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಹಾಗೂ ಸೇವಾ ಮನೋಭಾವದ ಮೂಲಕ ಗುರುತಿಸಿಕೊಂಡಿದ್ದ ಆಶಾ ಕಾರ್ಯಕರ್ತೆ ಆಶಾಬಾಯಿ ದೊಡ್ಮನಿ ಅವರ ವಯೋನಿವೃತ್ತಿ ಅಂಗವಾಗಿ ಬಡದಾಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾವಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಬಡದಾಳ ಪಿಎಚ್ಸಿ ವತಿಯಿಂದ ಆಶಾಬಾಯಿ ದೊಡ್ಮನಿ ಅವರ ಸುದೀರ್ಘ ಹಾಗೂ ನಿಷ್ಠಾವಂತ ಸೇವೆಯನ್ನು ಗುರುತಿಸಿ ‘ಆದರ್ಶ ಆಶಾ ಕಾರ್ಯಕರ್ತೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹೋದ್ಯೋಗಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಅವರ ಸೇವೆಯನ್ನು ಸ್ಮರಿಸಿ ಶುಭಹಾರೈಸಿದರು.
ಟಿಎಚ್ಒ ಡಾ. ಚೇತನ ಧುಮಾಲೆ ಮಾತನಾಡಿ, ಸರ್ಕಾರದ ಆರೋಗ್ಯ ಸೇವೆಗಳು ಹಾಗೂ ವಿವಿಧ ಯೋಜನೆಗಳು ಗ್ರಾಮೀಣ ಜನರಿಗೆ ತಲುಪುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆರೋಗ್ಯ ಇಲಾಖೆಯ ನಿಜವಾದ ಆಧಾರಸ್ಥಂಭಗಳಾಗಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ದಶಕಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಆಶಾಬಾಯಿ ಅವರ ಕರ್ತವ್ಯನಿಷ್ಠೆ ಇತರ ಆಶಾ ಕಾರ್ಯಕರ್ತೆಯರಿಗೆ ಮಾದರಿಯಾಗಿದೆ ಎಂದರು.
ರೇವೂರ(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರಸನ್ನ ಕಟ್ಟಿ ಮಾತನಾಡಿ, ಬಡದಾಳ ಭಾಗದ ಆಶಾ ಕಾರ್ಯಕರ್ತೆಯರು ಹಿಂದೆ ರೇವೂರ(ಬಿ) ಪಿಎಚ್ಸಿ ವ್ಯಾಪ್ತಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದರು. ಆಶಾಬಾಯಿ ಅವರು ತಮ್ಮ ಸುದೀರ್ಘ ಸೇವೆಯ ಮೂಲಕ ಅಪಾರ ಅನುಭವ ಸಂಪಾದಿಸಿದ್ದು, ಇಲಾಖೆಗೆ ಹಾಗೂ ಸಾರ್ವಜನಿಕರಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಯೋನಿವೃತ್ತಿಯಾದರೂ ಅವರ ಅನುಭವ ಹಾಗೂ ಮಾರ್ಗದರ್ಶನ ಸದಾ ಸ್ಮರಣೀಯವಾಗಿರಲಿದೆ ಎಂದರು.
ಆಶಾ ಕಾರ್ಯಕರ್ತೆಯರ ತಾಲೂಕು ಮೆಂಟರ್ ರೈಚಲ್ ರಾಣಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಅಲ್ಪ ಸಂಭಾವನೆಯಲ್ಲಿಯೇ ಹಗಲು-ರಾತ್ರಿ ಎನ್ನದೆ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿವೃತ್ತಿಯ ನಂತರ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಇಡಗಂಟು ವ್ಯವಸ್ಥೆ ಜಾರಿಗೊಳಿಸಬೇಕು. ಈ ಕುರಿತು ಸಂಘಟನೆಯ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಸಮಾರಂಭದಲ್ಲಿ ಆಶಾಬಾಯಿ ದೊಡ್ಮನಿ ಅವರ ಸೇವಾ ಅವಧಿಯ ನೆನಪುಗಳನ್ನು ಸಹೋದ್ಯೋಗಿಗಳು ಹಂಚಿಕೊಂಡು, ಅವರೊಂದಿಗೆ ಭಾವನಾತ್ಮಕವಾಗಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮುಸ್ತಫಾ ಮೇಮಿನ್, ಹಿರಿಯ ಪ್ರಾಥಮಿಕ ಆರೋಗ್ಯ ಅಧಿಕಾರಿ ಗೌರಮ್ಮ, ಸಂಜುಕುಮಾರ ಸಿಂಧೆ, ಮಹೇಶ ಪಟ್ಟಣಕರ, ಮಡಿವಾಳಪ್ಪ ಮಳ್ಳಿ, ಗಣೇಶಕುಮಾರ ಸಮಾಣೆ, ಸಂಜಿವಕುಮಾರ ಚರಂತಿಮಠ, ಸಂತೋಷಕುಮಾರ ಪಾಟೀಲ್, ಯೂಸೂಫ್ ಗುಡ್ಡಳ್ಳಿ, ಲಕ್ಷ್ಮೀಕಾಂತ ಅಂಬಿಗೇರ್, ಪ್ರಮೋದ ಪತ್ತಾರ, ಅಂಬಾರಾಯ ನಿಲಂಗಿ ಸೇರಿದಂತೆ ಬಡದಾಳ, ಬಳೂರ್ಗಿ ಹಾಗೂ ರೇವೂರ ಗ್ರಾಮದ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಶುಶ್ರೂಷಕಿ ಚಂದ್ರಕಲಾ ಕೈನೂರ ಸ್ವಾಗತ ಗೀತೆ ಹಾಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ ಮಹಾಜನ ಶೆಟ್ಟಿ ಸ್ವಾಗತಿಸಿದರು. ಎಫ್ಡಿಎ ಬಸವರಾಜ ಭೈರಾಮಡಗಿ ನಿರೂಪಿಸಿ ವಂದಿಸಿದರು.
ಆಶಾಬಾಯಿ ದೊಡ್ಮನಿ ಅವರ ಸೇವೆ ಶ್ಲಾಘನೀಯವಾಗಿದೆ. ಅವರ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ, ಸೇವಾ ಮನೋಭಾವ, ಸೌಮ್ಯ ಸ್ವಭಾವ ಹಾಗೂ ಇತರರಿಗೆ ಸಹಾಯ ಮಾಡುವ ಗುಣಗಳು ಎಲ್ಲರಿಗೂ ಮಾದರಿಯಾಗಿವೆ. ಇಂತಹ ಉತ್ತಮ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನ ಹಾಗೂ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು.
-ಡಾ. ರತ್ನಶೀಲ
ಆಡಳಿತ ವೈದ್ಯಾಧೀಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಡದಾಳ.




















