
ಸಂಜೆವಾಣಿ ವಾರ್ತೆ
ಬಸವಕಲ್ಯಾಣ: ಉತ್ತಮ ಆರೋಗ್ಯ ಕುರಿತಾಗಿ ಅರಿವು ಇರುವುದರಿಂದ ಆತಂಕವಿಲ್ಲದ ಯಶಸ್ವಿ ಜೀವನ ಸಾಗಿಸಬಹುದು ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀಮಠದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯನ ಬದುಕಿನಲ್ಲಿ ಸದೃಢ ಆರೋಗ್ಯ ಕಾಯ್ದುಕೊಳ್ಳುವುದು ಅತ್ಯಂತ ಮಹತ್ವವಾಗಿದೆ.
ಜೀವನ ಶೈಲಿ ಆರೋಗ್ಯವನ್ನು ನಿರ್ಧರಿಸಿದರೆ, ಉತ್ತಮ ಆರೋಗ್ಯ ದೀರ್ಘಕಾಲ ಜೀವನಕ್ಕೆ ಅಡಿಪಾಯ ಒದಗಿಸುತ್ತದೆ.
ಸಾತ್ವಿಕ ಆಹಾರ, ಉದಾತ್ತ ವಿಚಾರ, ಯೋಗ, ಧ್ಯಾನ, ವ್ಯಾಯಾಮ ಇತ್ಯಾದಿಗಳ ರೂಢಿಯಿಂದ ರೋಗವನ್ನು ದೂರ ಮಾಡಲು ಸಾಧ್ಯವಿದೆ.
ದುಶ್ಚಟಗಳಿಂದ ದೂರವಿದ್ದಷ್ಟು ಉತ್ತಮ ಆರೋಗ್ಯ ಸಮೀಪಿಸುತ್ತದೆ.
ನಮ್ಮ ಆರೋಗ್ಯದ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ ಎಂದು ಅರಿತು ಬದುಕಬೇಕು.
ದೇಶದ ತಾರುಣ್ಯ ಆರೋಗ್ಯದಿಂದಿದ್ದರೆ ಮಾತ್ರ ಸುಭದ್ರ ಭಾರತ ಸಾಧ್ಯ ಎಂದು ನುಡಿದ ಶ್ರೀಗಳು ಹಾರಕೂಡಧೀಶ ಸರ್ವರಿಗೂ ಚಂದದ ಆರೋಗ್ಯ, ಆಯುಷ್ಯ ಕರುಣಿಸಲಿ ಎಂದು ಶುಭ ಹಾರೈಸಿದರು.
ಡಾ. ಮಲ್ಲಿಕಾರ್ಜುನ ಮಾಲಿಪಾಟೀಲ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಕುರಿತು ಉಪನ್ಯಾಸ ನೀಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಹಣಮಂತರಾವ ಮುಕ್ತೆದಾರ, ಮಾಧುರಾಯ ಪಾಟೀಲ, ಕಂಟೆಪ್ಪಾ ಪಾಟೀಲ, ಬಾಬು ಮನ್ಪಡೆ ಉಪಸ್ಥಿತರಿದ್ದರು.
ಮಲ್ಲಿನಾಥ ಹಿರೇಮಠ ಹಾರಕೂಡ ಸ್ವಾಗತಿಸಿದರು.
ಕಾರ್ತಿಕ ಸ್ವಾಮಿ ಎಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.





















