
ರಾಯಚೂರು:ನ.೨೩-ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ರಾಯಚೂರು ಜಿಲ್ಲೆಯ ಇಬ್ಬರು ಸಾಧಕರಾದ ವೀರಹನುಮಾನ ಈರಣ್ಣ ರುದ್ರಾಕ್ಷಿ ಅವರಿಗೆ ಲಭಿಸಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಈ ಇಬ್ಬರು ಸಾಧಕರಿಗೆ ಸಂದಿರುವ ಪ್ರಶಸ್ತಿಗಳು ವೈಯಕ್ತಿಕ ಸಾಧನೆಯ ಗೌರವ ಮಾತ್ರವಲ್ಲದೆ, ಜಿಲ್ಲೆಯ ಕನ್ನಡ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಸೇವೆಗೆ ಸಂದ ಗೌರವವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ಅವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಯಚೂರು ಜಿಲ್ಲೆ ಸಾಹಿತ್ಯ ಮತ್ತು ಕಲಾ ಕ್ಷೇತ್ರಗಳಲ್ಲಿ ಹಿಂದಿನಿಂದಲೂ ತನ್ನದೇ ಆದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅನೇಕ ಸಾಹಿತಿಗಳು, ಕಲಾವಿದರು ಹಾಗೂ ಕನ್ನಡಪರ ಚಿಂತಕರು ನಿರಂತರವಾಗಿ ಕನ್ನಡದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಸಾಲಿನಲ್ಲಿ ಇಬ್ಬರು ಸಾಧಕರಿಗೆ ರಾಜ್ಯಮಟ್ಟದ ಅತ್ಯುನ್ನತ ಗೌರವ ಲಭಿಸಿರುವುದು ಜಿಲ್ಲೆಯ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದರು.
ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಅವರು ಅಭಿನಂದನಾ ನುಡಿಗಳನ್ನಾಡಿ, ವೀರಹನುಮಾನ ಅವರೊಂದಿಗಿನ ಹಲವು ವರ್ಷಗಳ ಒಡನಾಟ, ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಸ್ಮರಿಸಿದರು. ಅವರ ಸರಳತೆ, ನಿರಂತರ ಕಾರ್ಯಶೀಲತೆ, ಸೌಜನ್ಯ ಮತ್ತು ಕನ್ನಡದ ಬಗೆಗಿನ ಅಪಾರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಪ್ರಶಸ್ತಿ ಪುರಸ್ಕೃತರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿವೆ ಎಂದು ತಿಳಿಸಿದರು.
ರೇಖಾ ಪಾಟೀಲ್ ಅವರು ಮಾತನಾಡಿ, ಜಾನಪದ ಕಲೆಯ ವಿಶಿಷ್ಟ ಪ್ರಕಾರವಾದ ಹಗಲುವೇಷ ಕಲೆಯನ್ನು ಬದುಕಿನ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿಸಿಕೊಂಡು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಈರಣ್ಣ ರುದ್ರಾಕ್ಷಿ ಅವರ ಸಾಧನೆಗೆ ಈ ಪ್ರಶಸ್ತಿ ಸಂದಿದೆ. ವಿಶಿಷ್ಟ ಹಾಯ್ಕು ಸಾಹಿತ್ಯ ಪ್ರಕಾರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಏಡ್ಸ್ ಜಾಗೃತಿ ಕಾರ್ಯಕ್ರಮಗಳು, ನಾಟಕಗಳ ರಚನೆ, ಸಾಮಾಜಿಕ ಕಳಕಳಿ ಹಾಗೂ ಕೋಟೆ ಅಧ್ಯಯನ ಸಮಿತಿಯ ಸದಸ್ಯರಾಗಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ ಶ್ಲಾಘನೀಯವಾಗಿದೆ ಎಂದರು.
ನಂತರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀರಹನುಮಾನ ಹಾಗೂ ಈರಣ್ಣ ರುದ್ರಾಕ್ಷಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಹ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವೀರಹನುಮಾನ ಅವರು ತಮ್ಮ ಬದುಕಿನ ಪಯಣದ ಹೆಜ್ಜೆಗಳು, ಸಾಹಿತ್ಯಿಕ ಅನುಭವಗಳು ಹಾಗೂ ಪ್ರಶಸ್ತಿ ಲಭಿಸಿದ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಈರಣ್ಣ ರುದ್ರಾಕ್ಷಿ ಅವರು ತಮ್ಮ ವಿಶಿಷ್ಟ ಕಲೆಯ ಮೂಲಕ ಸುಂದರ ಪ್ರಸಂಗವೊಂದನ್ನು ಪ್ರಸ್ತುತಪಡಿಸಿ ಸಭಿಕರ ಮನಗೆದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರು ಅಧ್ಯಕ್ಷೀಯ ಮಾತುಗಳನ್ನಾಡಿ, ನವೆಂಬರ್ ತಿಂಗಳು ಕನ್ನಡಿಗರಿಗೆ ಸಂತಸ ಮತ್ತು ಸಂಭ್ರಮದ ಹಲವು ಕ್ಷಣಗಳನ್ನು ನೀಡಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸು ಹಾಗೂ ಜಿಲ್ಲೆಯ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವಿಸ್ಮರಣೀಯ ಸಂಗತಿಗಳಾಗಿವೆ. ಈ ಎಲ್ಲಾ ಸಾಧನೆಗಳ ಹಿಂದೆ ಅನೇಕರು ಸಲ್ಲಿಸಿದ ಶ್ರಮ, ಸಹಕಾರ ಮತ್ತು ಪ್ರೀತಿ ಇದೆ. ಪರಿಷತ್ತಿನ ಚಟುವಟಿಕೆಗಳಿಗೆ ಸಹಕರಿಸಿದ ಪ್ರತಿಯೊಬ್ಬರನ್ನೂ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ, ನಾಗಪ್ಪ ಹೊರಪ್ಯಾಟಿ, ಡಾ. ರತನ್ ಚೌಹಾಣ್, ಸೈಯ್ಯದ್ ಹಫಿಜುಲ್ಲಾ ಖಾದ್ರಿ ಹಾಗೂ ರಾವುತರಾವ್ ಬರೂರ ಉಪಸ್ಥಿತರಿದ್ದರು.
ಕನ್ನಡ ಭವನದ ಪರಿಚಾರಕರಾದ ಮನೋಹರ್ ಅವರ ನಿರಂತರ ಸೇವೆಯನ್ನು ಗುರುತಿಸಿ ಪ್ರೀತಿಯಿಂದ ಸನ್ಮಾನಿಸಲಾಯಿತು. ವೈಶಾಲಿ ಪಾಟೀಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳು, ಪ್ರಶಸ್ತಿ ಪುರಸ್ಕೃತರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಅಭಿನಂದನೆ ಮತ್ತು ಕೃತಜ್ಞತೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರ ಅಧ್ಯಕ್ಷೀಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಪರಿಷತ್ತಿನ ವತಿಯಿಂದ ಜಿಲ್ಲೆಯ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ನಿರಂತರ ಪ್ರಚಾರ ಮತ್ತು ಪ್ರೋತ್ಸಾಹ ನೀಡಿದ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಪ್ರತಿನಿಧಿಗಳಿಗೆ, ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳ ಎಲ್ಲ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಸಾಹಿತಿಗಳಿಗೆ, ದಾನಿಗಳಿಗೆ, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸಮಸ್ತ ಕನ್ನಡ ಮನಸ್ಸುಗಳಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.
ಕನ್ನಡದ ಸೇವೆಯಲ್ಲಿ ಎಲ್ಲರ ಸಹಕಾರವೇ ನಮ್ಮ ಶಕ್ತಿ, ಕನ್ನಡದ ಏಳಿಗೆಯೇ ನಮ್ಮೆಲ್ಲರ ಸಂಕಲ್ಪ ಎಂಬ ಆಶಯದೊಂದಿಗೆ ಕಾರ್ಯಕ್ರಮವು ಆತ್ಮೀಯವಾಗಿ ಮುಕ್ತಾಯಗೊಂಡಿತು.





















