
ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೬: ಯುವ ಲೇಖಕ ಸಂತೋಷ ಬಿರಾದಾರ ಅವರ ರಚಿತ “ಅವ್ವ ನಮ್ಮ ಮನೆ ವಾರೆನ್ ಬಫೆಟ್” ಕನ್ನಡ ಪುಸ್ತಕವನ್ನು ನಿಡೋಣಿ ವಿರಕ್ತ ಮಠದ ಪರಮಪೂಜ್ಯ ಸಿದ್ದಲಿಂಗ ಶ್ರೀಗಳು ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಶ್ರೀಗಳು, “ಸರಳ ಮತ್ತು ಸೊಗಸಾದ ಭಾಷೆಯಲ್ಲಿ ತಾಯಿಯ ಜೀವನ ಮೌಲ್ಯಗಳು, ಕುಟುಂಬದ ಸಂಸ್ಕಾರ ಹಾಗೂ ಬದುಕಿನ ಪಾಠಗಳನ್ನು ಈ ಕೃತಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಗ್ರಾಮೀಣ ಸೊಗಡಿನ ಭಾಷೆಯ ಬಳಕೆ ಓದುಗರನ್ನು ಬಾಲ್ಯದ ನೆನಪುಗಳತ್ತ ಕರೆದೊಯ್ಯುತ್ತದೆ. ಪುಸ್ತಕವು ಓದುಗರ ಮನಸ್ಸಿನಲ್ಲಿ ಉತ್ತಮ ಸಂಸ್ಕಾರ ಮತ್ತು ಪ್ರೇರಣೆಯನ್ನು ಮೂಡಿಸುವ ಶಕ್ತಿಯನ್ನು ಹೊಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕ ಸಂತೋಷ ಬಿರಾದಾರ ಅವರು ಪುಸ್ತಕದ ಆಶಯವನ್ನು ವಿವರಿಸಿ, ತಾಯಿಯಿಂದ ಕಲಿತ ಜೀವನ ಮೌಲ್ಯಗಳು, ಉಳಿತಾಯದ ಮಹತ್ವ ಹಾಗೂ ಸಾಮಾನ್ಯ ಕುಟುಂಬದ ಬದುಕಿನ ಅನುಭವಗಳೇ ಈ ಕೃತಿಯ ಮೂಲ ಪ್ರೇರಣೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಡೋಣಿ ಗ್ರಾಮದ ಹಿರಿಯರಾದ ಸೋಮಶೇಖರ ಕೋಟ್ಯಾಳ, ಜಾಫರ್ ಇನಾಮದಾರ, ರಾಜು ತಕ್ಕಳಕಿ, ಪ್ರಭುಲಿಂಗ ಬಿರಾದಾರ, ಜಬ್ಬಾರ್ ಇನಾಮದಾರ, ಶಾನು ಸಾರವಾಡ, ಶಿವಪ್ಪ ಹಾಗೂ ಶಿವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.































