
ತುರುವೇಕೆರೆ, ಜು. ೯- ಕಷ್ಟದ ಜೀವನವನ್ನು ಅನುಭವಿಸಿ, ಬಂದ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ ಯಶಸ್ಸನ್ನು ಸಾಧಿಸಿದವನು ನಾನು. ಕಷ್ಟದಲ್ಲಿರುವವರ ಬದುಕಿನ ಅರಿವಿದ್ದು, ನನ್ನ ಅಧಿಕಾರದ ಅವಧಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಹೆಚ್ಚಿನ ನೆರವಾಗಲು ಬಯಸುತ್ತೇನೆ ಎಂದು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸುನೀಲ್ ಬಾಬು ಹೇಳಿದರು.
ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ನಲ್ಲಿ ನಡೆದ ೨೦೨೬-೨೭ನೇ ಸಾಲಿನ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಬಡತನದ ಕಷ್ಟಗಳನ್ನು ಅನುಭವಿಸಿದ್ದೇನೆ. ಧೈರ್ಯ ಮತ್ತು ಸಾಧಿಸುವ ಛಲವಿದ್ದ ವ್ಯಕ್ತಿಗೆ ಕಷ್ಟವೆಂಬುದು ಹೊರೆಯಾಗುವುದಿಲ್ಲ. ಆದರೆ ಸೋಮಾರಿಗೆ ಕಷ್ಟ ಭಾರವಾಗುತ್ತದೆ. ಬದುಕು ಸೋಲಿನೆಡೆಗೆ ಮುಖ ಮಾಡುತ್ತದೆ. ಜೀವನದಲ್ಲಿ ಬರುವ ಕಷ್ಟಗಳಿಗೆ ಹೆದರದೆ ಎದುರಿಸಿ ಮುನ್ನಡೆದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ನನ್ನ ಬದುಕಿನಲ್ಲಿ ಯಶಸ್ಸಿಗೆ ಸಹಕಾರ ನೀಡಿದ ನನ್ನ ಕುಟುಂಬ ವರ್ಗ, ಸ್ನೇಹಿತರನ್ನು ಮರೆಯಲು ಸಾಧ್ಯವಿಲ್ಲ. ಸಾಕಷ್ಟು ವರ್ಷಗಳಿಂದ ನನ್ನ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದೇನೆ. ಲಯನ್ಸ್ ಕ್ಲಬ್ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ನನ್ನ ಕೈಲಾದ ಸೇವೆ ಮಾಡುತ್ತಾ ಬಂದಿದ್ದೇನೆ. ಲಯನ್ಸ್ ಕ್ಲಬ್ ಸದಸ್ಯರು ಒಮ್ಮತದಿಂದ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬರದಂತೆ ನಿಸ್ವಾರ್ಥತೆ ಹಾಗೂ ಪ್ರಾಮಾಣಿಕತೆಯಿಂದ ಬಡವರು, ಅಶಕ್ತರ ನೆರವಿಗೆ ಯೋಜನೆಗಳನ್ನು ರೂಪಿಸಿ ಸೇವೆ ಸಲ್ಲಿಸುತ್ತೇನೆ. ಪರಿಸರ ಸಂರಕ್ಷಣೆ, ಮಹಿಳಾ, ಯುವ ಸಬಲೀಕರಣ ಪ್ರಸ್ತುತ ದಿನಮಾನದಲ್ಲಿ ಮೊದಲ ಆದ್ಯತೆಯಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ಹೆಚ್ಚು ಸಸಿ ನೆಡುವ, ಮನೆಯ ಆವರಣದಲ್ಲಿ ಪರಿಸರ ಸಂರಕ್ಷಿಸುವವರಿಗೆ ಪ್ರಶಸ್ತಿ ನೀಡುವ, ಮಹಿಳೆಯರು, ಯುವ ಸಮೂಹಕ್ಕೆ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ಏರ್ಪಡಿಸುವ ಕೆಲಸದಲ್ಲಿ ಸದಸ್ಯರೊಡಗೂಡಿ ಕಾರ್ಯೋನ್ಮುಖನಾಗುತ್ತೇನೆ ಎಂದರು.
ಸಮಾರಂಭ ಉದ್ಘಾಟಿಸಿದ ಲಯನ್ಸ್ ಸಂಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಅಸಹಾಯಕರು, ಅಶಕ್ತರಿಗೆ ಅಗತ್ಯ ಸೌಲಭ್ಯವನ್ನು ಒದಗಿಸುವ, ಅಂಧರಿಗೆ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯ ಮೂಲಕ ದೃಷ್ಟಿ ನೀಡುವ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ಪರಿಕರ ವಿತರಣೆ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಗೆ ಆರ್ಥಿಕ ನೆರವು, ಪರಿಸರ ಸಂರಕ್ಷಣೆ ಸೇರಿದಂತೆ ನೂರಾರು ಕಾರ್ಯಕ್ರಮಗಳನ್ನು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಕಳೆದ ೩ ದಶಕಗಳಿಂದ ನಿರಂತರವಾಗಿ ತುರುವೇಕೆರೆ ಲಯನ್ಸ್ ಸಂಸ್ಥೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ೨೦೨೬-೨೭ನೇ ಸಾಲಿಗೆ ಲಯನ್ಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುನಿಲ್ ಬಾಬು ಹಾಗೂ ತಂಡ ಇನ್ನೂ ಹೆಚ್ಚಿನ ಸಾಮಾಜಿಕ, ಜನಪರ ಸೇವೆಯನ್ನು ಕೈಗೊಳ್ಳಲಿ ಎಂದು ಹಾರೈಸುತ್ತಾ, ನಾಗರೀಕರು ಸಹ ಲಯನ್ಸ್ ನ ಸೇವಾ ಚಟುವಟಿಕೆಗಳಿಗೆ ಕೈಜೋಡಿಸುವ ಮೂಲಕ ತಾವು ಸಹ ಸೇವೆ ಮಾಡುವ ಪುಣ್ಯದ ಕೆಲಸದಲ್ಲಿ ಪಾಲುದಾರರಾಗಬೇಕು ಎಂದರು.
ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ರಾಜ್ಯಪಾಲ ಡಾ.ನಾಗರಾಜ್ ರಾವ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭಕ್ಕೆ ಆಗಮಿಸಿದ ನಾಗರೀಕರಲ್ಲಿ ಅದೃಷ್ಟವಂತ ಪುರುಷ, ಮಹಿಳೆ ಹಾಗೂ ದಂಪತಿ ಆಯ್ಕೆ ಮಾಡಿ ಬಹುಮಾನ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿತೈಷಿಗಳು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸುನಿಲ್ ಬಾಬು ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಹೆಚ್.ಎನ್. ಪರಮೇಶ್ವರಯ್ಯ ವಹಿಸಿದ್ದರು. ಶಾಸಕ ಎಂ.ಟಿ.ಕೃಷ್ಣಪ್ಪ, ಪ್ರಾಂತ್ಯಾಧ್ಯಕ್ಷ ಹೆಚ್.ಎಸ್. ಮಹೇಶ್, ಎಡಿಸಿಎಸ್ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಟಿ.ವಿ. ಮಹೇಶ್, ವಲಯಾಧ್ಯಕ್ಷ ಲೋಕೇಶ್, ಜಿ.ಎಲ್.ಟಿ. ಸದಸ್ಯ ರಂಗನಾಥ್, ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಚೌದ್ರಿ ನಾಗೇಶ್, ರೂರಲ್ ಮಾರ್ಕೆಟಿಂಗ್ ಜಿಲ್ಲಾಧ್ಯಕ್ಷ ಡಾ.ಎ.ನಾಗರಾಜ್, ಖಜಾಂಚಿ ಸುನಿಲ್ ಕುಮಾರ್, ನೂತನ ಕಾರ್ಯದರ್ಶಿ ಎಸ್.ವಿ. ರವಿ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.
































