
ಗುಬ್ಬಿ, ಜು. ೨೮- ಮಣ್ಣಿನ ಆರೋಗ್ಯ ರಕ್ಷಣೆ, ಪೋಷಕಾಂಶಗಳ ನಿರ್ವಹಣೆ, ಸುಸ್ಥಿರ ಕೃಷಿ ಪದ್ಧತಿಗಳು ಹಾಗೂ ಬೆಳೆಗಳಲ್ಲಿ ಜೈವಿಕ ಪೋಷಕಾಂಶಗಳ ಸಮರ್ಪಕ ಬಳಕೆ ಮಾಡುವುದರಿಂದ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಮೃತ್ ಸಂಸ್ಥೆಯ ಕೃಷಿ ತಜ್ಞ ಪ್ರಭಾಕರ್ ಹೇಳಿದರು.
ತಾಲ್ಲೂಕಿನ ಕಡಬ ಹೊಬಳಿ ಟಿ.ಹೊಸಹಟ್ಟಿ ಗ್ರಾಮದಲ್ಲಿ ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ಸ್ ಮಲ್ಲಾಡಿಹಳ್ಳಿ ಹಾಗೂ ನಿಟ್ಟೂರು ರೈತ ಉತ್ಪಾದಕರ ಕಂಪನಿ ನಿಟ್ಟೂರು ವತಿಯಿಂದ ಏರ್ಪಡಿಸಿದ್ದ ರೈತರಿಗೆ ತಾಂತ್ರಿಕ ಮಾಹಿತಿ ಜಾಗೃತ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಣ್ಣಿನ ಆರೋಗ್ಯದ ಪ್ರಾಮುಖ್ಯತೆಯನ್ನು ತಿಳಿದು, ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ಆಗ ನಾವು ಹೆಚ್ಚಿಗೆ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಪ್ರಮುಖ ಪ್ರತಿನಿಧಿ ಎಲ್. ಮುರಳಿಧರ್ ಮಾತನಾಡಿ, ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ಸ್ ಸಂಸ್ಥೆಯು ಜೈವಿಕ ಗೊಬ್ಬರಗಳು, ಸಾವಯವ ಪೋಷಕಾಂಶಗಳು ಹಾಗೂ ಸಸ್ಯ ಪ್ರವರ್ಧಕ ಉತ್ಪನ್ನಗಳ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಬಳಸುವುದರಿಂದ ಮಣ್ಣಿನ ಹಾಗೂ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಇದೇ ಸಂದರಭದಲ್ಲಿ ರೈತರ ಸಂವಾದದಲ್ಲಿ ಕಂಪನಿಯ ಸಿಇಒ ಕುಮಾರ್ ಜೈವಿಕ ಉತ್ಪನ್ನಗಳು, ಪರಿಸರ ಸ್ನೇಹಿ ಗುಣಮಟ್ಟ ಹಾಗೂ ಕ್ಷೇತ್ರ ಮಟ್ಟದಲ್ಲಿ ಸಂಸ್ಥೆಯ ತಾಂತ್ರಿಕ ಬೆಂಬಲದ ಕುರಿತು ಭಾಗವಹಿಸಿದ ಪ್ರಗತಿ ಪರ ರೈತರಿಗೆ ತಿಳಿಸಿದರು.
ಪ್ರಗತಿಪರ ರೈತರಾದ ಚಿಕ್ಕಣ್ಣ, ಶಿವಕುಮಾರ್, ಸಿದ್ದಲಿಂಗಯ್ಯ ರವರು ತಮ್ಮ ಸಾವಯವ ಕೃಷಿ ಹಾಗೂ ಗೊಬ್ಬರದ ಬಗ್ಗೆ ಮೆಚ್ಚುಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ’ಅಮೃತ್ ಸಂಸ್ಥೆಯ ಟಿ.ವಿಷ್ಣು, ರೈತ ಮುಖಂಡರು ಭಾಗವಹಿಸಿದ್ದರು.
































