Home ಸುದ್ದಿ ಅಂತರಾಷ್ಟ್ರೀಯ ಖ್ಯಾತ ಕಪ್ಪು ವರ್ಣೀಯ ಕಲಾವಿದೆ ಬೆಟ್ಯೆ ಸಾರ್ ನಿಧನ

ಖ್ಯಾತ ಕಪ್ಪು ವರ್ಣೀಯ ಕಲಾವಿದೆ ಬೆಟ್ಯೆ ಸಾರ್ ನಿಧನ

ಲಾಸ್ ಏಂಜಲೀಸ್,ಜು.28:- ಅಮೆರಿಕದ ಬ್ಲ್ಯಾಕ್ ಆಟ್ರ್ಸ್' ಚಳವಳಿಯ ಪ್ರವರ್ತಕಿ ಹಾಗೂ ಜಗತ್ಪ್ರಸಿದ್ಧಅಸೆಂಬ್ಲೇಜ್’ ಶೈಲಿಯ ಪ್ರವರ್ತಕ ಕಲಾವಿದೆ ಬೆಟ್ಯೆ ಸಾರ್ ಅವರು ಭಾನುವಾರ ಬೆಳಿಗ್ಗೆ ಲಾಸ್ ಏಂಜಲೀಸ್‍ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.
ದೈನಂದಿನ ವಸ್ತುಗಳನ್ನು ಬಳಸಿ ಅದ್ಭುತ ಶಿಲ್ಪಗಳನ್ನು ರಚಿಸುವ ‘ಅಸೆಂಬ್ಲೇಜ್’ ಶೈಲಿಯಲ್ಲಿ ಪ್ರಸಿದ್ಧಿ ಪಡೆದಿದ್ದ ಬೆಟ್ಯೆ ಸಾರ್, ‘ಜಿಮ್ ಕ್ರೋ’ ಕಪ್ಪು ಕಾನೂನುಗಳ ಕಾಲದಲ್ಲಿದ್ದ ಬೊಂಬೆಗಳು, ಬೋರ್ಡ್‍ಗಳು ಸೇರಿದಂತೆ ವರ್ಣಭೇದ ನೀತಿಯನ್ನು ಬಿಂಬಿಸುವ ವಸ್ತುಗಳನ್ನು ಸಂಗ್ರಹಿಸಿ, ಅವುಗಳಿಗೆ ಕಪ್ಪು ವರ್ಣೀಯರ ವಿಮೋಚನೆಯ ಸಂಕೇತವಾಗಿ ಮರುರೂಪ ನೀಡುತ್ತಿದ್ದರು. ಶಿಲ್ಪಕಲೆಯಷ್ಟೇ ಅಲ್ಲದೆ, ಮುದ್ರಣಕಲೆ ಹಾಗೂ ಚಲನಚಿತ್ರ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು ತಮ್ಮ ಕೃತಿಗಳ ಮೂಲಕ ಕುಟುಂಬ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಜಗತ್ತಿನೆದುರು ತೆರೆದಿಟ್ಟರು.


ತಮ್ಮ ವೃತ್ತಿಜೀವನವನ್ನು ವಿನ್ಯಾಸಕಿಯಾಗಿ ಪ್ರಾರಂಭಿಸಿದ ಸಾರ್, 35ನೇ ವಯಸ್ಸಿನಲ್ಲಿ ಕಲಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. 90ರ ಹರೆಯದಲ್ಲೂ ಕಲಾ ಸೇವೆಯನ್ನು ಮುಂದುವರಿಸಿದ್ದ ಇವರು, ಪಾಸಡೇನಾದಲ್ಲಿ ಬೆಳೆದು ಅಲ್ಟಾಡೇನಾದ ಕಪ್ಪು ವರ್ಣೀಯ ಕಲಾವಿದರ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಸೈಮನ್ ರೋಡಿಯಾ ಅವರ ‘ವಾಟ್ಸ್ ಟವರ್ಸ್’ ತಮ್ಮ ಆರಂಭಿಕ ದಿನಗಳ ಪ್ರೇರಣೆ ಎಂದು ಅವರು ಆಗಾಗ್ಗೆ ಸ್ಮರಿಸುತ್ತಿದ್ದರು.


ಅಸಂಖ್ಯಾತ ಬದಲಾವಣೆಗೆ ನಾಂದಿ ಹಾಡಿದ ಕಲಾಕೃತಿ:
ಸಾರ್ ಅವರ ಕಲಾಕೃತಿಗಳಲ್ಲಿ 1972ರಲ್ಲಿ ಅವರು ರಚಿಸಿದ ಲಿಬರೇಷನ್ ಆಫ್ ಆಂಟ್ ಜೆಮಿಮಾ' ಅತ್ಯಂತ ಕ್ರಾಂತಿಕಾರಿ ಮತ್ತು ಪ್ರಸಿದ್ಧ ಕಲಾಕೃತಿಯಾಗಿದೆ. ಕಪ್ಪು ವರ್ಣೀಯ ಮಹಿಳೆಯರನ್ನು ಗುಲಾಮಗಿರಿಗೆ ಸೀಮಿತಗೊಳಿಸಿ ಬಿಂಬಿಸುತ್ತಿದ್ದಆಂಟ್ ಜೆಮಿಮಾ’ ಸಿರಪ್ ಬ್ರ್ಯಾಂಡ್‍ನ ಚಿತ್ರವನ್ನು ಮರುರೂಪಿಸಿದ್ದ ಸಾರ್, ಆ ಚಿತ್ರದ ಮಹಿಳೆಯ ಎಡಕೈಯಲ್ಲಿ ಬಂದೂಕು ಹಾಗೂ ಬಲಕೈಯಲ್ಲಿ ಗ್ರೆನೇಡ್ ಇಟ್ಟು ಕಪ್ಪು ವರ್ಣೀಯರ ಶಕ್ತಿಯ ಸಂಕೇತವಾಗಿ ಬದಲಾಯಿಸಿದ್ದರು. ಈ ಪ್ರತಿಭಟನಾತ್ಮಕ ಕಲಾಕೃತಿಯ ಪ್ರಭಾವದಿಂದಾಗಿ 2021ರಲ್ಲಿ ಕ್ವೇಕರ್ ಓಟ್ಸ್' ಕಂಪನಿಯು ಈ ಲೋಗೋವನ್ನು ಹಿಂಪಡೆಯಿತು. ತಮ್ಮ ಪ್ರಯಾಣದ ಉದ್ದಕ್ಕೂ ಕಸದ ಮಾರುಕಟ್ಟೆಗಳು ಮತ್ತು ಹಳೆಯ ವಸ್ತುಗಳ ಸಂತೆಗಳಿಂದ ಸಾಂಪ್ರದಾಯಿಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಅವರು, ಕಪ್ಪು ವರ್ಣೀಯರ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ನಂಬಿಕೆಗಳನ್ನು ತಮ್ಮ ಕಲೆಗೆ ಬಳಸಿಕೊಳ್ಳುತ್ತಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಕೆರ್ರಿ ಜೇಮ್ಸ್ ಮಾರ್ಷಲ್ ಸೇರಿದಂತೆ ಪೀಳಿಗೆಯ ಕಪ್ಪು ವರ್ಣೀಯ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದ ಬೆಟ್ಯೆ ಸಾರ್, ವೆಸ್ಟ್ ಕೋಸ್ಟ್ ಕಲಾ ಜಗತ್ತಿನ ಹಿರಿಯ ಕೊಂಡಿಯಾಗಿದ್ದರು. ಇತ್ತೀಚೆಗೆ ಅಂದರೆ 2026ರ ವಸಂತಕಾಲದಲ್ಲಿ, ಇವರನ್ನುಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಆಂಡ್ ಲೆಟರ್ಸ್’ ಸದಸ್ಯತ್ವ ನೀಡಿ ಗೌರವಿಸಲಾಗಿತ್ತು.