
ಗ್ಲಾಸ್ಗೊ, ಜು.೨೭-ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಕ್ರೀಡಾಕೂಟ-೨೦೨೬ರಲ್ಲಿ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜುಲೈ ೨೬ರಂದು ನಡೆದ ಮಹಿಳೆಯರ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು ೧೯೦ ಕೆ.ಜಿ. (ಸ್ನ್ಯಾಚ್‌ನಲ್ಲಿ ೮೫ ಕೆ.ಜಿ. ಹಾಗೂ ಕ್ಲೀನ್ ಅಂಡ್ ಜರ್ಕ್‌ನಲ್ಲಿ ೧೦೫ ಕೆ.ಜಿ.) ಭಾರ ಎತ್ತುವ ಮೂಲಕ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಚಾನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಚಿನ್ನದ ಖಾತೆ ತೆರೆದರು.
೩೧ ವರ್ಷದ ಮೀರಾಬಾಯಿ ಚಾನು, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕನೇ ಪದಕ ಗೆದ್ದ ಸಾಧನೆ ಮಾಡಿದ್ದು, ಭಾನುವಾರ ಭಾರತಕ್ಕೆ ಪದಕ ತಂದುಕೊಟ್ಟ ಎರಡನೇ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಚನಂಬಂ ರಿಷಿಕಾಂತ ಸಿಂಗ್ ಭಾರತಕ್ಕೆ ಪದಕ ಗೆದ್ದಿದ್ದರು.
ಸ್ನ್ಯಾಚ್ ವಿಭಾಗದಲ್ಲಿ ಮೀರಾಬಾಯಿ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದರೂ, ಎರಡನೇ ಪ್ರಯತ್ನದಲ್ಲಿ ೮೨ ಕೆ.ಜಿ. ಭಾರ ಎತ್ತಿ ಕ್ರೀಡಾಕೂಟದ ದಾಖಲೆ ನಿರ್ಮಿಸಿದರು. ಬಳಿಕ ಮೂರನೇ ಪ್ರಯತ್ನದಲ್ಲಿ ೮೫ ಕೆ.ಜಿ. ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಕಾಮನ್‌ವೆಲ್ತ್ ಹಾಗೂ ಕ್ರೀಡಾಕೂಟದ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಇದಕ್ಕೂ ಮೊದಲು ಅವರದೇ ಹೆಸರಿನಲ್ಲಿದ್ದ ೮೪ ಕೆ.ಜಿ. ಕಾಮನ್‌ವೆಲ್ತ್ ದಾಖಲೆಯನ್ನು ಅವರು ಮುರಿದರು.
ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲೂ ಮೊದಲ ಪ್ರಯತ್ನ ವಿಫಲವಾದರೂ, ಬಳಿಕ ಅದ್ಭುತವಾಗಿ ಮರಳಿ ೧೦೫ ಕೆ.ಜಿ. ಭಾರ ಎತ್ತುವ ಮೂಲಕ ಮತ್ತೊಂದು ಕ್ರೀಡಾಕೂಟದ ದಾಖಲೆಯನ್ನು ನಿರ್ಮಿಸಿದರು. ನೈಜೀರಿಯಾದ ರೂತ್ ನಿಯೋಂಗ್ ೯೩ ಕೆ.ಜಿ. ಭಾರ ಎತ್ತಿದ್ದರಿಂದ, ಮೀರಾಬಾಯಿ ೧೦೫ ಕೆ.ಜಿ. ಯಶಸ್ವಿಯಾಗಿ ಎತ್ತುತ್ತಿದ್ದಂತೆಯೇ ಚಿನ್ನದ ಪದಕ ಖಚಿತವಾಯಿತು.
ಸ್ಪರ್ಧೆಗೆ ಮುನ್ನವೇ ಮೀರಾಬಾಯಿ ಚಾನು, ತಮ್ಮ ಪ್ರಮುಖ ಗುರಿ ಇನ್ನೆರಡು ತಿಂಗಳಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಎಂದು ಹೇಳಿದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಂಪೂರ್ಣ ಶಕ್ತಿ ಪ್ರದರ್ಶನ ಮಾಡುವುದಿಲ್ಲ, ಏಷ್ಯನ್ ಗೇಮ್ಸ್‌ಗೆ ಅನುಗುಣವಾಗಿ ಯೋಜನೆ ರೂಪಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದ್ದರು.
ಆದರೆ ಗ್ಲಾಸ್ಗೊದಲ್ಲಿ ತೋರಿದ ಅವರ ಪ್ರದರ್ಶನ, ಏಷ್ಯನ್ ಗೇಮ್ಸ್ ನಲ್ಲೂ ಭಾರತಕ್ಕೆ ಮತ್ತೊಂದು ಐತಿಹಾಸಿಕ ಸಾಧನೆ ತಂದುಕೊಡುವ ವಿಶ್ವಾಸವನ್ನು ಹೆಚ್ಚಿಸಿದೆ. ಮಣಿಪುರದ ಈ ಚಿನ್ನದ ಹುಡುಗಿ ಮತ್ತೊಮ್ಮೆ ತಮ್ಮ ಅಸಾಧಾರಣ ಸಾಮರ್ಥ್ಯವನ್ನು ಸಾಬೀತುಪಡಿಸಿ ಭಾರತದ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆದಿದ್ದಾರೆ.



























