
ಮಂಗಳೂರು,ಆ.೪(ಕ.ವಾ): ಯುವಜನರನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪೊತ್ಸಾಹಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ವಾರ್ಡ್‌ಗಳಲ್ಲಿ ಸಶಕ್ತ ಯುವ ಜನತೆಯನ್ನು ಒಂದುಗೂಡಿಸುವ ಉದ್ದೇಶದಿಂದ ಭಾರತ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತದೆ. ನಗರ ಮತ್ತು ಗ್ರಾಮಾಂತರ ವ್ಯಾಪ್ತಿಗಳಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿ, ಸಂಘಗಳ ರಚನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭಾರತ ಜೋಡೋ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಲ್ಲಿ ಹಾಗೂ ಕಾಲೇಜುಗಳಲ್ಲಿ ಅರಿವು ಮೂಡಿಸಿ ಮತ್ತು ಪ್ರಚಾರ ಕೈಗೊಳ್ಳಲು ಕ್ರಮ ಕೈಗೊಂಡು ನೋಂದಣಿ ಹೆಚ್ಚಾಗುವಂತೆ ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಭಾರತ್ ಜೋಡೋ ಯುವ ಸಂಘಗಳು ಪರಿಣಾಮಕಾರಿಯಾಗಿ ಸಕ್ರಿಯವಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ತಿಳಿದು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಾಗಿ ಜಿಲ್ಲಾಧಿಕಾರಿಗಳು ಸೂಚಿಸಿದರು.
ಯೋಜನೆಯ ಯಶಸ್ವಿ ಅನು??ಠನಕ್ಕಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಅವರಿಗೆ ಜವಾಬ್ದಾರಿ ನೀಡಲಾಗಿದೆ. ನಗರ ಪ್ರದೇಶಗಳಿಗೆ ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕರು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಪ್ರತೀ ಗ್ರಾ.ಪಂ./ಮಹಾನಗರಪಾಲಿಕೆ ವಾರ್ಡ್‌ಗೆ ಒಂದು ಸಂಘ
ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಪ್ರದೀಪ್ ಡಿಸೋಜಾ ಮಾತನಾಡಿ, ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಒಂದು ಸಂಘ, ಪ್ರತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ ೪೦೦೦ ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆಯಲ್ಲಿ ಸರಾಸರಿ ೬೦೦೦ ಜನಸಂಖ್ಯೆಗೆ ಒಂದು ಸಂಘ, ಪ್ರತಿ ನಗರಸಭೆಯಲ್ಲಿ ಸರಾಸರಿ ೮೦೦೦ ಜನ ಸಂಖ್ಯೆಗೆ ಒಂದು ಸಂಘ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಾಸರಿ ೧೦೦೦೦ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲು ಸರಕಾರದ ನಿರ್ದೇಶನವಿದೆ ಎಂದರು.
ಭಾರತ್ ಜೋಡೋ ಯುವ ಸಂಘದಲ್ಲಿ ಪ್ರತಿಯೊಬ್ಬ ಸದಸ್ಯರ ನೋಂದಣಿಗೆ ಆಧಾರ್ ಕಡ್ಡಾಯ, ಘಟಕ ರಚನೆಗೆ ಕನಿಷ್ಠ ೧೦೦ ಯುವ ಸದಸ್ಯರಿರಬೇಕು, ಅರ್ಜಿದಾರರು ಅದೇ ಗ್ರಾಮ ಪಂಚಾಯತಿ, ವಾರ್ಡ್ ಆಗಿರಬೇಕು, ಪ್ರತಿಯೊಬ್ಬ ಸದಸ್ಯರು ಒಂದು ಸಂಘಕ್ಕೆ ಮಾತ್ರ ಸದಸ್ಯರಾಗಲು ಅರ್ಹರಿರುತ್ತಾರೆ ಎಂದರು.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಟ್ಟು ೧೨೩ ಸಂಘಗಳು ಸ್ಥಾಪನೆಯಾಗಲಿದ್ದು, ಈ ಪೈಕಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀ ವಾರ್ಡ್‌ಗೆ ಒಂದರಂತೆ ೬೦ ಸಂಘ ಸ್ಥಾಪನೆಯಾಗಲಿದೆ ಎಂದು ಜಿಲ್ಲಾ ನಗರಾಭಿವೃಧ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್ ತಿಳಿಸಿದರು.
ವಾರ್ಷಿಕ ೧೦ ಲಕ್ಷ ರೂ. ಅನುದಾನ*
ಭಾರತ್ ಜೋಡೋ ಯುವ ಸಂಘಗಳು ಕ್ರೀಡೆ ಮತ್ತು ಫಿಟ್ ನೆಸ್, ಸಮುದಾಯ ಅಭಿವೃದ್ಧಿ, ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಯೋಗಕ್ಷೇಮ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ, ಕೌಶಲ್ಯ ಮತ್ತು ಯುವ ಸಬಲೀಕರಣ, ರಾಷ್ಟ್ರೀಯ ಹಬ್ಬಗಳ ಆಚರಣೆ, ವಿಪತ್ತು ನಿರ್ವಹಣೆ ಮತ್ತು ಪರಿಹಾರ, ಜಲ ಸಂಕ್ಷಣೆ ಚಟುವಟಿಕೆಗಳು, ಗ್ರಾಹಕ ಜಾಗೃತಿ ಅಭಿಯಾನಗಳು, ಸೈಬರ್ ಸುರಕ್ಷತಾ ಜಾಗೃತಿ, ಸಂಚಾರ ಜಾಗೃತಿ ಅಭಿಯಾನ , ಕೃಷಿ ಮತ್ತು ಗ್ರಾಮೀಣ ನಾವೀನ್ಯತೆ ಇತ್ಯಾದಿ ಹಾಗೂ ಧೂಮಪಾನ, ಮಧ್ಯಪಾನ, ಡ್ರಗ್ಸ್ ವಿರುದ್ಧ ಚಟುವಟಿಕೆಗಳು ಸೇರಿದಂತೆ ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ತಯಾರಿಸಿ ಅನು??ಠನಗೊಳಿಸಬೇಕು. ಪ್ರತೀ ಯುವ ಸಂಘಕ್ಕೆ ವಾರ್ಷಿಕ ರೂ. ೧೦ ಲಕ್ಷ ರೂ. ಅನುದಾನ ಬಿಡುಗಡೆಯಾಲಿದೆ ಎಂದು ಪ್ರದೀಪ್ ಡಿಸೋಜಾ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಭಾರಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಅಪರ ಜಿಲ್ಲಾಧಿಕಾರಿ ರಾಜು ಕೆ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.


































