Home ಜಿಲ್ಲೆ ಮಂಗಳೂರು ಉಳ್ಳಾಲ: ವಿದ್ಯುತ್ ದುರಸ್ತಿ ವೇಳೆ ಮೆಸ್ಕಾಂ ಲೈನ್‌ಮ್ಯಾನ್‌ಗೆ ಶಾಕ್ – ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತ್ಯು

ಉಳ್ಳಾಲ: ವಿದ್ಯುತ್ ದುರಸ್ತಿ ವೇಳೆ ಮೆಸ್ಕಾಂ ಲೈನ್‌ಮ್ಯಾನ್‌ಗೆ ಶಾಕ್ – ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತ್ಯು

ಮಂಗಳೂರು: ವಿದ್ಯುತ್ ದುರಸ್ತಿ ಕಾರ್ಯ ನಿರತರಾಗಿದ್ದ ಮೆಸ್ಕಾಂ ಲೈನ್‌ಮ್ಯಾನ್ ಒಬ್ಬರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ದುರ್ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಣದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಅಂಬಿಕಾರೋಡ್, ಪಿಲಾರು ನಿವಾಸಿ ಶೇಖ್ ಝಮೀರ್ (೪೯) ಮೃತಪಟ್ಟ ಮೆಸ್ಕಾಂ ಸಿಬ್ಬಂದಿ.
ಉಚ್ಚಿಲ ನಯಾಪಟ್ಣದ ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಹಕರಿಂದ ಮೆಸ್ಕಾಂಗೆ ದೂರು ಬಂದಿತ್ತು. ದೂರು ನಿರ್ವಹಣೆಗೆ ಸಂಬಂಧಿಸಿದಂತೆ ಶೇಖ್ ಝಮೀರ್ ಹಾಗೂ ಅವರ ಸಹೋದ್ಯೋಗಿ ಸಂಗಪ್ಪ ಸ್ಥಳಕ್ಕೆ ಆಗಮಿಸಿದ್ದರು. ದುರಸ್ತಿ ಕಾರ್ಯ ಆರಂಭಿಸುವ ಮುನ್ನ ಲೈನ್ ಆಫ್ ಆಗಿರಬಹುದು ಎಂದು ಭಾವಿಸಿದ ಝಮೀರ್, ಟ್ರಾನ್ಸ್‌ಫಾರ್ಮರ್ ಏರಿ ಕೆಲಸದಲ್ಲಿ ತೊಡಗಿದ್ದರು.
ಈ ವೇಳೆ ಆಕಸ್ಮಿಕವಾಗಿ ಪ್ರವಹಿಸಿದ ತೀವ್ರ ವಿದ್ಯುತ್ ಆಘಾತದ ಪರಿಣಾಮವಾಗಿ ಝಮೀರ್ ಮೇಲಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಲಭಿಸುವ ಮುನ್ನವೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲದಿಂದ ಮೆಸ್ಕಾಂನಲ್ಲಿ ಲೈನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಖ್ ಝಮೀರ್ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಘಟನೆ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.