
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.27: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಂದೆಯವರ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಹಾಗು ಅವರು ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿ ನಗರದಲ್ಲಿಂದು ಬಿಜೆಪಿ ಪ್ರತಿಭಟನೆ ನಡೆಸಿತು.
ನಗರದ ಗಡಗಿ ಚೆನ್ನಪ್ಪ ಸರ್ಕಲ್ ನಲ್ಲಿ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಸೇರಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ದ ಘೋಷಣೆ ಕೂಗಿದರು.
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆಯಾಚಿಸಬೇಕು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ರಾಜಕೀಯದಲ್ಲಿ ವೈಯಕ್ತಿಕ ನಿಂದನೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಲಾಯ್ತು.
ಈ ವೇಳೆ ಮಾತನಾಡಿದ ಸೋಮಶೇಖರ ರೆಡಿ, ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೇ ಮೋದಿ ಎಲ್ಲಿಗೂ ಹೋಗಲ್ಲ, ಅವರು ಇದ್ದೇ ಇರ್ತಾರೆ ಎಂದಿದ್ದಾನೆ. ಈಗಲಾದರೂ ಕಾಂಗ್ರೆಸ್ ನವರಿಗೆ ತಿಳಿಯಬೇಕು. ಕೇವಲ ಸುಳ್ಳು ಹೇಳಿಕೆಗಳಿಂದ ಪ್ರತಿಭಟನೆ ಮಾಡಿದರೆ ಜನ ಮೆಚ್ಚಲ್ಲ. ಜನಮೆಚ್ಚುವಂತಹ ಕೆಲಸ ಮಾಡಿ ಅಧಿಕಾರಕ್ಕೆ ಬರಬೇಕು. ವಿಶ್ವವೇ ಕೊಂಡಾಡುವ ನಾಯಕ ಮೋದಿ ಹಾಗು ಅವರ ತಂದೆ ಬಗ್ಗೆ ಮಾತನಾಡಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕೀಳು ಸಂಸ್ಕೃತಿಯನ್ನು ತೋರಿಸಿದ್ದಾರೆ ಈಗಲಾದರೂ ತಮ್ಮಮಾತುಗಳ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಎಸ್.ಗುರುಲಿಂಗನಗೌಡ,ಜಿ.ವೆಂಕಟ ರಮಣ ಗೋನಾಳ್ ಮುರಹರಗೌಡ, ಎಸ್.ಮಲ್ಲನಗೌಡ, ಹೆಚ್.ಹನುಂಮತಪ್ಪ, ಕೆ.ಎಸ್.ದಿವಾಕರ್, ಪಾಲಿಕೆ ಪ್ರತಿ ಪಕ್ಷದ ನಾಯಕ ಮೋತ್ಕರ್ ಶ್ರೀನಿವಾಸ್, ಸದಸ್ಯ ಕೆ.ಹನುಂಮತಪ್ಪ, ಮುಖಂಡರುಗಳಾದ ಶಂಕ್ರಪ್ಪ, ಡಾ.ರೇಣುಕಾ ಮಂಜುನಾಥ, ಕೆ.ಎ.ವೇಮಣ್ಣ, ಹಂಪಿ ರಮಣ,
ಕೆ.ಎಂ.ಮಹೇಶ್ವರಸ್ವಾಮಿ, ಪಿ.ಎಸ್. ಸೋಮಲಿಂಗನಗೌಡ, ದರೂರು ಶಾಂತನಗೌಡ, ಕೆ.ಆರ್ ಮಲ್ಲೇಶ್, ಕೋಳೂರು ಚಂದ್ರಶೇಖರಗೌಡ, ರಾಮಾಂಜಿನಿ ಗುಗ್ಗರಹಟ್ಟಿ, ಅಲ್ಲಾ ಬಕಾಷ್, ಮಲ್ಲಿಕಾರ್ಜುನಗೌಡ ಶಂಕರಬಂಡೆ, ,ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಪಕ್ಷದ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.






















