
*ಎನ್ಐಸಿಯುನಲ್ಲಿ ಸಿಪಿಎಪಿ ಯಂತ್ರ ಬಿಸಿಯಾಗಿ ಬೆಂಕಿ ಅವಘಡ
*ಜನಿಸಿದ ೨೭ ಗಂಟೆಯಲ್ಲೇ ಮಗುವಿಗೆ ಗಂಭೀರ ಗಾಯ
ಬೆಂಗಳೂರು.ನ೨೪: ನಗರದ ರಾಜಾಜಿನಗರದಲ್ಲಿರುವ ಇಎಸ್ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಸಿಪಿಎಪಿ ಯಂತ್ರ ಅತಿಯಾಗಿ ಬಿಸಿಯಾಗಿ ನವಜಾತ ಹೆಣ್ಣುಮಗುವಿನ ಮೂಗಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಗುವಿನ ತಾಯಿಗೆ ೪೦ ಲಕ್ಷ ಪರಿಹಾರ ನೀಡುವಂತೆ ಬೆಂಗಳೂರು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಆಯೋಗದ ಅಧ್ಯಕ್ಷ ಸೈಯದ್ ಅನ್ಸರ್ ಕಲೀಂ ನೇತೃತ್ವದ ಪೀಠ, ಆಸ್ಪತ್ರೆಯ ಸೇವಾ ಲೋಪ ಮತ್ತು ವೈದ್ಯಕೀಯ ನಿರ್ಲಕ್ಷ್ಯವನ್ನು ಪರಿಗಣಿಸಿ ಇಎಸ್ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಡೀನ್, ಮುಖ್ಯ ವೈದ್ಯಾಧಿಕಾರಿ ಹಾಗೂ ಅಂದಿನ ಎನ್ಐಸಿಯು ಉಸ್ತುವಾರಿಯನ್ನು ಜಂಟಿಯಾಗಿ ಮತ್ತು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಿದೆ.
ಜನಿಸಿದ ೨೭ ಗಂಟೆಯಲ್ಲೇ ಅವಘಡ
ಜೆ.ಪಿ. ನಗರದ ನಿವಾಸಿಯಾದ ಮಹಿಳೆ ೨೦೨೨ರ ಆಗಸ್ಟ್ ೧೭ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ತುರ್ತು ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಕೇವಲ ೨೯ ವಾರ ಮೂರು ದಿನಗಳ ಗರ್ಭಾವಸ್ಥೆಯಲ್ಲಿ ಜನಿಸಿದ್ದ ಮಗು ೧.೨೨ ಕೆ.ಜಿ. ತೂಕ ಹೊಂದಿತ್ತು. ಉಸಿರಾಟದ ತೀವ್ರ ಸಮಸ್ಯೆ ಹಿನ್ನೆಲೆಯಲ್ಲಿ ಮಗುವನ್ನು ಸಿಪಿಎಪಿ (ನಿರಂತರ ಧನಾತ್ಮಕ ವಾಯುಮಾರ್ಗ ಒತ್ತಡ) ಯಂತ್ರದ ನೆರವಿನಿಂದ ಎನ್ಐಸಿಯುನಲ್ಲಿ ಇರಿಸಲಾಗಿತ್ತು.
ಆಗಸ್ಟ್ ೧೯ರಂದು, ಮಗು ಜನಿಸಿದ ಸುಮಾರು ೨೭ ಗಂಟೆಗಳ ಬಳಿಕ ಯಂತ್ರದ ಹ್ಯೂಮಿಡಿಫೈಯರ್ ಮತ್ತು ಥರ್ಮೋಸ್ಟಾಟ್ನಲ್ಲಿ ದೋಷ ಕಾಣಿಸಿಕೊಂಡಿತ್ತು. ಇದರಿಂದ ಯಂತ್ರದ ಉಷ್ಣತೆ ೫೨ರಿಂದ ೬೯ ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿತ್ತು. ಮೂಗಿಗೆ ಅಳವಡಿಸಿದ್ದ ಮಾಸ್ಕ್ನಿಂದ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದವು. ಪರಿಣಾಮ ಮಗುವಿನ ಮೂಗಿಗೆ ಆಳವಾದ ಸುಟ್ಟ ಗಾಯಗಳಾಗಿದ್ದು, ಮೂಗಿನ ಭಾಗ ಕಪ್ಪಾಗಿತ್ತು.
ತಕ್ಷಣ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಸುಮಾರು ೯೦ ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು.
ಶಾಶ್ವತವಾಗಿ ಮುಖದ ಆಕಾರಕ್ಕೆ ಹಾನಿ
ಈ ಅವಘಡದಿಂದ ಮಗುವಿನ ಮೂಗಿನ ಆಕಾರ ಶಾಶ್ವತವಾಗಿ ವಿಕಾರಗೊಂಡಿದ್ದು, ಕೂದಲಿನ ಕೆಲವು ಭಾಗಗಳಲ್ಲಿಯೂ ತೇಪೆತೇಪೆಯಾಗಿ ಕೂದಲು ಉದುರಿದೆ ಎಂದು ತಾಯಿ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಮಗುವಿಗೆ ಮುಂದಿನ ದಿನಗಳಲ್ಲಿ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆದರೆ ಮಗುವಿಗೆ ೧೩ರಿಂದ ೧೬ ವರ್ಷ ವಯಸ್ಸಾಗುವವರೆಗೆ ಇಂತಹ ಶಸ್ತ್ರಚಿಕಿತ್ಸೆ ನಡೆಸುವುದು ಸುರಕ್ಷಿತವಲ್ಲ ಎಂದು ಪ್ಲಾಸ್ಟಿಕ್ ಸರ್ಜರಿ ತಜ್ಞರು ಸಲಹೆ ನೀಡಿದ್ದಾರೆ.
ಆಸ್ಪತ್ರೆಯ ವಾದ ತಿರಸ್ಕರಿಸಿದ ಆಯೋಗ
ಸಿಪಿಎಪಿ ಯಂತ್ರ ನಾಲ್ಕು ವರ್ಷ ಹಳೆಯದಾಗಿದ್ದು, ನಿರ್ವಹಣಾ ಒಪ್ಪಂದದಡಿ ಇತ್ತು. ೨೦೨೨ರ ಮಾರ್ಚ್ನಲ್ಲಿಯೂ ಯಂತ್ರದ ಸೇವೆ ಮತ್ತು ದುರಸ್ತಿ ಮಾಡಲಾಗಿತ್ತು. ಯಂತ್ರದಲ್ಲಿನ ಆಂತರಿಕ ದೋಷಕ್ಕೆ ಅದರ ತಯಾರಿಕಾ ಸಂಸ್ಥೆ ಫ್ಯಾನೆಮ್ ಹೊಣೆ ಎಂದು ಆಸ್ಪತ್ರೆ ವಾದಿಸಿತ್ತು.
ಮಗುವನ್ನು ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲು ಸುಮಾರು ?೩.೧೬ ಲಕ್ಷ ವೆಚ್ಚ ಭರಿಸಿದ್ದು, ಅಲ್ಲಿನ ೯೦ ದಿನಗಳ ಚಿಕಿತ್ಸೆಯ ಬಿಲ್ಗಳನ್ನೂ ಪಾವತಿಸಲಾಗಿದೆ ಎಂದು ಆಸ್ಪತ್ರೆ ತಿಳಿಸಿತ್ತು. ಅಲ್ಲದೆ, ಇಎಸ್ಐ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದರಿಂದ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಸೇವಾ ಲೋಪದ ಪ್ರಕರಣ ಅನ್ವಯಿಸುವುದಿಲ್ಲ ಎಂದೂ ವಾದಿಸಿತ್ತು.
ಆದರೆ ಈ ವಾದಗಳನ್ನು ಆಯೋಗ ತಳ್ಳಿಹಾಕಿದೆ. ನೌಕರರ ವೇತನದಿಂದ ಕಡಿತಗೊಳ್ಳುವ ಹಣದ ಮೂಲಕ ಇಎಸ್ಐ ಚಿಕಿತ್ಸೆ ಒದಗಿಸಲಾಗುವುದರಿಂದ ಅದನ್ನು ಉಚಿತ ಸೇವೆ ಎಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದೆ. ನವಜಾತ ಶಿಶುವಿನಂತಹ ಸೂಕ್ಷ್ಮ ಸ್ಥಿತಿಯಲ್ಲಿರುವ ರೋಗಿಗೆ ಬಳಸುವ ವೈದ್ಯಕೀಯ ಉಪಕರಣದ ಸುರಕ್ಷತೆಯ ಹೊಣೆಗಾರಿಕೆಯನ್ನು ಆಸ್ಪತ್ರೆ ತಯಾರಿಕಾ ಸಂಸ್ಥೆಯ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಎನ್ಐಸಿಯುನಲ್ಲೇ ಯಂತ್ರದಿಂದ ಬೆಂಕಿ ಕಾಣಿಸಿಕೊಂಡಿರುವುದು ಆಸ್ಪತ್ರೆಯ ಮೇಲ್ವಿಚಾರಣೆ ಮತ್ತು ಸುರಕ್ಷತಾ ವ್ಯವಸ್ಥೆಯಲ್ಲಿನ ಗಂಭೀರ ವೈಫಲ್ಯವನ್ನು ತೋರಿಸುತ್ತದೆ ಎಂದು ಆಯೋಗ ಹೇಳಿದೆ.
ದೀರ್ಘಾವಧಿ ಠೇವಣಿಗೆ ೪೦ ಲಕ್ಷ
ಮಗುವಿನ ಸಹಜ ಮುಖದ ಆಕಾರವನ್ನು ಯಾವುದೇ ಹಣದಿಂದ ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ ಭವಿಷ್ಯದಲ್ಲಿ ಎದುರಾಗಬಹುದಾದ ದುಬಾರಿ ಶಸ್ತ್ರಚಿಕಿತ್ಸೆ ಹಾಗೂ ಮಾನಸಿಕ ಆರೋಗ್ಯದ ಆರೈಕೆಯ ವೆಚ್ಚಗಳನ್ನು ಭರಿಸಲು ಮಗುವಿಗೆ ಆರ್ಥಿಕ ಭದ್ರತೆ ಕಲ್ಪಿಸುವುದು ಅಗತ್ಯ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಹೀಗಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆ-೨೦೧೯ರ ಸೆಕ್ಷನ್ ೩೯ರ ಅಡಿಯಲ್ಲಿ ೪೦ ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಈ ಮೊತ್ತಕ್ಕೆ ದೂರು ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇ.೬ರ ಬಡ್ಡಿಯನ್ನೂ ಪಾವತಿಸಬೇಕು. ಪರಿಹಾರದ ಮೊತ್ತವನ್ನು ಮಗುವಿನ ಹೆಸರಿನಲ್ಲಿ ದೀರ್ಘಾವಧಿಯ ಸ್ಥಿರ ಠೇವಣಿಯಲ್ಲಿ ಇರಿಸಬೇಕು. ಮಗುವಿನ ಕಲ್ಯಾಣಕ್ಕಾಗಿ ತಾಯಿ ತ್ರೈಮಾಸಿಕವಾಗಿ ಬಡ್ಡಿ ಮೊತ್ತವನ್ನು ಪಡೆಯಬಹುದು ಎಂದು ಆಯೋಗ ನಿರ್ದೇಶಿಸಿದೆ.




















