Home ಜಿಲ್ಲೆ ಮಂಗಳೂರು ಹಾರಾಡಿ ಕಾಂಕ್ರೀಟ್ ಕಾಮಗಾರಿ ಅವ್ಯವಸ್ಥೆ ಬಿಜೆಪಿಯಿಂದ ತಿಂಗಳ ಗಡು- ಪ್ರತಿಭಟನೆಯ ಎಚ್ಚರಿಕೆ

ಹಾರಾಡಿ ಕಾಂಕ್ರೀಟ್ ಕಾಮಗಾರಿ ಅವ್ಯವಸ್ಥೆ ಬಿಜೆಪಿಯಿಂದ ತಿಂಗಳ ಗಡು- ಪ್ರತಿಭಟನೆಯ ಎಚ್ಚರಿಕೆ

ಪುತ್ತೂರು: ಉಪ್ಪಿನಂಗಡಿ-ಪುತ್ತೂರು ನಡುವಣ ಹಾರಾಡಿ ರೈಲ್ವೇ ಸೇತುವೆಯಡಿಯಲ್ಲಿನ ಕಾಂಕ್ರೀಟ್ ಕಾಮಗಾರಿ ಅವ್ಯವಸ್ಥೆಯಿಂದ ತುಂಬಿದೆ. ತಿಂಗಳ ಒಳಗಾಗಿ ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದರು.
ಅವರು ಗುರುವಾರ ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಹಾರಾಡಿ- ಬೊಳುವಾರು ಮಧ್ಯದ ಕಾಂಕ್ರೀಟ್ ಕಾಮಗಾರಿ ವೀಕ್ಷಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.
ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಬೊಳುವಾರು ಭಾಗದ ೧.೮೦ ಕಿ.ಮೀ. ಕಾಂಕ್ರೀಟ್ ಕಾಮಗಾರಿ ಡಿಸೆಂಬರ್ ಗೆ ಮುಗಿಯಬೇಕಿದ್ದು, ಆದರೆ ಅವಧಿ ಮುಗಿದು ೮ ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ರಸ್ತೆ ಕಾಮಗಾರಿಯ ಅವ್ಯವಸ್ಥೆಯಿಂದ ಜನರು, ವಾಹನದವರು ಸಂಕಷ್ಟ ಅನುಭವಿಸುತ್ತಿದ್ದು, ಬಿಜೆಪಿಯು ಅಭಿವೃದ್ಧಿಗೆ ಅಡ್ಡಿ ಮಾಡದೆ ಆದರೆ ಕಾಮಗಾರಿ ಮುಗಿಸಬೇಕು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಎಇಇ ರಾಜೇಶ್ ರೈ ಅವರೊಂದಿಗೆ ಚರ್ಚಿಸಿದ ಮಾಜಿ ಶಾಸಕರು ಕಾಮಗಾರಿಯ ಗೊಂದಲದಿಂದಲೇ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ಸು, ಜನಸಂಚಾರ ಇಲ್ಲದೆ ಆಟೋ ರಿಕ್ಷಾ ಚಾಲಕರಿಗೆ ಪಾರ್ಕ್-ಬಾಡಿಗೆ ಇಲ್ಲದಂತಾಗಿದ್ದು, ವರ್ತಕರಿಗೆ ವ್ಯಾಪಾರವೇ ಇಲ್ಲದಂತಾಗಿದೆ. ಸರ್ಕಲ್ ಗೆ ಡಿಪಿಆರ್ ಮಾಡದೆ ಕಾಮಗಾರಿ ನಡೆಸಲಾಗುತ್ತಿದ್ದು, ದೊಡ್ಡ ಲಾರಿಗಳು ಬಂದರೆ ತಿರುಗಲು ಸರಿಯಾದ ವ್ಯವಸ್ಥೆಯೇ ಇಲ್ಲದಂತಾಗಿದೆ. ಇದನ್ನು ತಕ್ಷಣ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಾರಾಡಿ ರೈಲ್ವೇ ಮೇಲ್ಸೆತುವೆಯ ಬಳಿ ಕಾಮಗಾರಿಗಾಗಿ ಒಂದು ತಿಂಗಳು ರಸ್ತೆ ಬಂದ್ ಮಾಡಲಾಗಿದ್ದು, ಆಗಲೇ ಚರಂಡಿ-ಮೋರಿ ಕಾಮಗಾರಿ ಮಾಡುವ ಬದಲು ಈಗ ಸಂಚಾರ ಮರು ಆರಂಭದ ಬಳಿಕ ಮಾಡುತ್ತಿರುವುದರಿಂದ ವಾಹನದವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದೂರದವರಿಗೆ ಟೆಂಡರ್ ನೀಡಲಾಗಿದ್ದು, ಅವರು ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ನಾನು ಸೇರಿದಂತೆ ಹಿಂದಿನ ಶಾಸಕರು ಈ ರಸ್ತೆಯ ಸಾಕಷ್ಟು ಭಾಗವನ್ನು ಚತುಷ್ಪಥ ಮಾಡಿದ್ದು, ಆದರೆ ಬಾಕಿ ಉಳಿದ ೩ ಕಿ.ಮೀ. ರಸ್ತೆಯಲ್ಲಿ ೧.೮೦ ಕಿ.ಮೀ.ರಸ್ತೆ ಅಪೂರ್ಣ ಸ್ಥಿತಿಯಲ್ಲಿದೆ. ಕೆಸರುಮಯ ರಸ್ತೆಯಲ್ಲಿ ಬ್ಲಾಕ್ ನಲ್ಲಿ ನಿಂತು ಬರಬೇಕಾದ ಸ್ಥಿತಿ ಇದ್ದು, ಕಳೆದ ೬ ತಿಂಗಳಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರ ಆದಾಯಕ್ಕೂ ಕುತ್ತು ಬಂದಿದ್ದು, ಪರವೂರಿನ ಗುತ್ತಿಗೆದಾರರ ಬೇಜಾವಾಬ್ದಾರಿ ಕಂಡುಬರುತ್ತಿದ್ದು, ಅಧಿಕಾರಿಗಳು ಕೂಡ ಅದಕ್ಕೆ ಸಾಥ್ ನೀಡುತ್ತಿರುವ ಸಂಶಯ ವ್ಯಕ್ತವಾಗುತ್ತಿದೆ. ಜನಪ್ರತಿನಿಧಿಗಳು, ಸರಕಾರ, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು, ನಗರಸಭಾ ಮಾಜಿ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕ, ಜೀವಂಧರ್ ಜೈನ್, ಪಕ್ಷದ ಪ್ರಮುಖರಾದ ವಿದ್ಯಾ ಗೌರಿ, ಪ್ರಸನ್ನ ದರ್ಬೆ, ಸತೀಶ್ ನಾಯ್ಕ್ ದರ್ಬೆ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ನಿರಂಜನ್ ಮಾನ್ಯ, ಪುರುಷೋತ್ತಮ ಮುಂಗ್ಲಿಮನೆ, ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಸುನೀಲ್ ದಡ್ಡು, ನಿತೇಶ್ ಕಲ್ಲೇಗ, ಯಶೋಧಾ, ವಿರೂಪಾಕ್ಷ ಮಚ್ಚಿಮಲೆ, ಯುವರಾಜ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ರಾಜೇಶ್ ಪರ್ಪುಂಜ, ವಿಶ್ವನಾಥ ಗೌಡ ಬನ್ನೂರು, ಲಕ್ಷ್ಮಣ್ ಕೋಡಿಂಬಾಡಿ, ಮುರಳೀಕೃಷ್ಣ ಹಸಂತಡ್ಕ, ಲೋಕೇಶ್ ಚಾಕೋಟೆ, ಗೌರಿ ಬನ್ನೂರು, ಇಂದಿರಾ ಆಚಾರ್ಯ, ಸುಜಾತ ಕೃಷ್ಣ ಮೊದಲಾದವರಿದ್ದರು.