Home ಜಿಲ್ಲೆ ಎಚ್‌ಐವಿ ತಡೆಗೆ ಯುವಜನರ ಜಾಗೃತಿ ಮುಖ್ಯ

ಎಚ್‌ಐವಿ ತಡೆಗೆ ಯುವಜನರ ಜಾಗೃತಿ ಮುಖ್ಯ

ಧಾರವಾಡ,ಆ೨೬: ಯುವಕರು ಎಚ್‌ಐವಿ ಹಾಗೂ ಏಡ್ಸ್ ಕುರಿತು ಸರಿಯಾದ ಮಾಹಿತಿ ಹೊಂದುವುದರ ಜೊತೆಗೆ, ಸೋಂಕು ಹರಡುವಿಕೆ ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಹೊಂದಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಅವರು ಹೇಳಿದರು.


ಅವರು ಕರ್ನಾಟಕ ಕಲಾ ಮಹಾವಿದ್ಯಾಲಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಐ.ಇ.ಸಿ. ವಿಭಾಗ ಹಾಗೂ ಎನ್. ಎಸ್. ಎಸ್ ಘಟಕ ಎ ಮತ್ತು ಬಿ ಹಾಗೂ ವಾರ್ತಾ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಹೆಚ್.ಐ.ವಿ ಏಡ್ಸ್ ಅರಿವಿನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.


ಯುವ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವ ದಿನವಾಗಿ ಆಚರಿಸಲಾಗುತ್ತಿದೆ. ಯುವಕರು ದೇಶದ ಶಕ್ತಿಯಾಗಿದ್ದು, ಸರಿಯಾದ ದಾರಿಯಲ್ಲಿ ಸಾಗಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ. ಎಚ್‌ಐವಿ ಸೋಂಕು ಮುಖ್ಯವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ರಕ್ತ, ಸೋಂಕಿತ ಸೂಜಿ ಅಥವಾ ಸಿರಿಂಜ್ ಬಳಕೆ ಹಾಗೂ ತಾಯಿಯಿಂದ ಮಗುವಿಗೆ ಹರಡಬಹುದು. ಆದ್ದರಿಂದ ಯುವಕರು ಅಪಾಯಕಾರಿ ಚಟುವಟಿಕೆಗಳಿಂದ ದೂರವಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.


ಎಚ್‌ಐವಿ ಸೋಂಕಿನ ಬಗ್ಗೆ ಮುಜುಗರ ಪಡದೆ ಅಗತ್ಯವಿದ್ದಲ್ಲಿ, ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭದಲ್ಲಿಯೇ ಸೋಂಕು ಪತ್ತೆಯಾದರೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಿದ್ದು, ಸರ್ಕಾರಿ ಆಸ್ಪತ್ರೆಗಳು ಮತ್ತು ಎಆರ್‌ಟಿ ಕೇಂದ್ರಗಳಲ್ಲಿ ಉಚಿತ ಔಷಧಿ ಲಭ್ಯವಿದೆ.


ಎಚ್‌ಐವಿ ಸೋಂಕಿತರನ್ನು ಸಮಾಜದಿಂದ ದೂರವಿಡುವುದು ಅಥವಾ ಅವರೊಂದಿಗೆ ಭೇದಭಾವ ಮಾಡುವುದು ಸರಿಯಲ್ಲ. ಸೋಂಕಿತರೊAದಿಗೆ ಸಾಮಾನ್ಯವಾಗಿ ಮಾತನಾಡುವುದು, ಕೈಕುಲುಕುವುದು, ಜೊತೆಯಲ್ಲಿ ಕುಳಿತು ಊಟ ಮಾಡುವುದು ಅಥವಾ ಒಂದೇ ಸ್ಥಳದಲ್ಲಿ ವಾಸಿಸುವುದರಿಂದ ಎಚ್‌ಐವಿ ಹರಡುವುದಿಲ್ಲ. ಈ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು. ಯುವಕರು ಎಚ್‌ಐವಿ ಕುರಿತು ಪಡೆದ ಮಾಹಿತಿಯನ್ನು ತಮ್ಮ ಸ್ನೇಹಿತರು, ಸಹಪಾಠಿಗಳು ಹಾಗೂ ಇತರ ಯುವಕರಿಗೂ ತಿಳಿಸುವ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ಮಹಾವಿದ್ಯಾಲಯ ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಮುಕುಂದ ಲಮಾಣಿ ಅವರು ಮಾತನಾಡಿ, ಯುವಜನರು ಕ್ಷಣಿಕ ಸುಖಕ್ಕಾಗಿ ತಮ್ಮ ಆರೋಗ್ಯ ಹಾಗೂ ಭವಿಷ್ಯವನ್ನು ಹಾಳು ಮಾಡಿಕೊಳ್ಳದೆ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು. ರೋಗವನ್ನು ತಡೆಯೋಣ, ರೋಗಿಯನ್ನು ಅಲ್ಲ ಎಂಬ ಸಂದೇಶದೊAದಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ನೈತಿಕ ಬೆಂಬಲ ಮಹತ್ವದ್ದಾಗಿದೆ. ಇತ್ತೀಚೆಗೆ ಯುವಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಿಪಿ, ಶುಗರ್‌ನಂತಹ ಕಾಯಿಲೆಗಳು ಅನಿರೀಕ್ಷಿತವಾಗಿ ಬರುತ್ತವೆ. ಆದ್ದರಿಂದ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.


ಕಿಮ್ಸ್ ಆರ್‌ಐ ಹುಬ್ಬಳ್ಳಿ ಸಹಾಯಕ ಪ್ರಾದ್ಯಾಪಕ ಡಾ. ಬಾಲಕೃಷ್ಣ ಟೆಲಿ ಅವರು ಹೆಚ್‌ಐವಿ ಹಾಗೂ ಏಡ್ಸ್ ಅರಿವಿನ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ ಪೋಸ್ಟರ್ ಬಿಡುಗಡೆ ಮಾಡಿದರು.


ಜಿಲ್ಲಾ ಕ್ಷಯರೋಗ ನಿರ್ಮೂಲನಾ ಏಡ್ಸ್ ನಿಯಂತ್ರಣಾ ಅಧಿಕಾರಿ ಡಾ. ರವೀಂದ್ರ ಆರ್.ಬೋವೇರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು.


ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್. ಅಂಗಡಿ, ಕರ್ನಾಟಕ ಕಲಾ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಐ.ಸಿ. ಮುಳಗುಂದ, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಮಂಜುನಾಥ ಎಸ್., ತಾಲೂಕಾ ಆರೋಗ್ಯ ಅಧಿಕಾರಿ ಡಾ. ತನುಜಾ ಕೆ.ಎನ್., ಕರ್ನಾಟಕ ಕಲಾ ಮಹಾವಿದ್ಯಾಲಯ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು ಡಾ.ಎಸ್ ಎಸ್. ಕೊಳೂರ, ಡಾ, ಸಿ.ಬಿ.ಐನಳ್ಳಿ, ಜಿಲ್ಲಾ ಮೇಲ್ವಿಚಾರಕ ಶಂಕರಗೌಡ ಪಾಟೀಲ್ ಅವರು ಇದ್ದರು.


ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಕರ್ನಾಟಕ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.