
ಬೆಂಗಳೂರು, ಜು. ೨೫- ಪ್ರಧಾನಿ ಮೋದಿ ಅವರು ಗರ್ವ ಹಾಗೂ ಪ್ರತಿಷ್ಠೆಯ ಕಾರಣದಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಮೊದಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದು ತನಿಖೆ ಮಾಡಬೇಕಿತ್ತು. ರಾಜೀನಾಮೆಯನ್ನು ಮೊದಲೆ ಪಡೆದಿದ್ದರೆ ಇಷ್ಟೊಂದೆಲ್ಲಾ ಅನಾಹುತ ಆಗುತ್ತಿರಲಿಲ್ಲ. ಆದರೆ ಪ್ರಧಾನಿ ಮೋದಿ ಅವರಿಗೆ ಗರ್ವ ಹಾಗೂ ಪ್ರತಿಷ್ಠೆಯಿಂದ ಇದು ಆಗಿಲ್ಲ ಎಂದರು.
ದೇಶದ ಯುವಕರಿಗೆ ಕೇಂದ್ರ ಸರ್ಕಾರದ ಮೇಲೆ ನಂಬಿಕೇಯೇ ಹೋಗಿದೆ. ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನೀಟ್ ಅಕ್ರಮ ವಿಚಾರ ಬಹಳ ಸೂಕ್ಷ್ಮ ಇದೆ. ಅದು ಪ್ರಧಾನಿ ಮೋದಿ ಅವರಿಗೆ ಅರ್ಥವೇ ಆಗುತ್ತಿಲ್ಲ. ಸುದ್ದಿಗೋಷ್ಠಿ ಮಾಡೆದ ವಾಟ್ಸ್‌ಪ್‌ನಲ್ಲೇ ಮಾತನಾಡುತ್ತಿದ್ದಾರೆ. ಹಿಂದೆ ಯಾವ ಪ್ರಧಾನಿಯೂ ಈ ರೀತಿ ಮಾಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ವಿದ್ಯಾರ್ಥಿಗಳ ಹೋರಾಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಎಲ್ಲವನೂ ಬಗೆಹರಿಸಬೇಕಿತ್ತು. ಆದರೆ ಪ್ರತಿಷ್ಠೆಯಿಂದ ಅವರು ಈ ಕೆಲಸ ಮಾಡಲಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ದೂರಿದರು.
ಪ್ರಧಾನಿ ಮೋದಿ ಅವರಿಗೆ ಯುವ ಜನಾಂಗ, ವಿದ್ಯಾರ್ಥಿಗಳ ಭವಿಷ್ಯ ಬೇಕಾಗಿಲ್ಲ. ಪಕೋಡ ಮಾರಲು ಅವರೇ ಹೇಳಿದ್ದಾರಲ್ಲಾ ಎಂದು ವ್ಯಂಗ್ಯವಾಡಿದರು.































