
ನವದೆಹಲಿ,ಆ.೯: ಅಮೆರಿಕ ಮತ್ತು ಭಾರತದ ನಡುವಿನ ವ್ಯೂಹಾತ್ಮಕ ಬಾಂಧವ್ಯವನ್ನು ಮತ್ತಷ್ಟು ದೃಢಗೊಳಿಸುವ ಹಾಗೂ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದರು.
ಉಭಯ ನಾಯಕರ ಈ ಮಹತ್ವದ ಸಂಭಾಷಣೆಯಲ್ಲಿ ವ್ಯಾಪಾರ, ರಕ್ಷಣೆ, ಉದಯೋನ್ಮುಖ ತಂತ್ರಜ್ಞಾನಗಳು, ಇಂಧನ ಭದ್ರತೆ ಹಾಗೂ ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಂದಕ್ಕೆ ಬರಲಾಗಿದೆ.
ಸಂಭಾಷಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, “ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಂದ ಕರೆ ಬಂದಿತ್ತು. ಭಾರತ-ಅಮೆರಿಕ ಸಮಗ್ರ ಜಾಗತಿಕ ವ್ಯೂಹಾತ್ಮಕ ಭಾಗಸ್ವಾಮ್ಯವನ್ನು ಪ್ರಮುಖ ಕ್ಷೇತ್ರಗಳಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಕುರಿತು ನಾವು ಚರ್ಚಿಸಿದೆವು” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಜೆಡಿ ವ್ಯಾನ್ಸ್ ಹಾಗೂ ದ್ವಿತೀಯ ಮಹಿಳೆ ಉಷಾ ವ್ಯಾನ್ಸ್ ದಂಪತಿಗೆ ಇತ್ತೀಚೆಗೆ ಗಂಡು ಮಗುವಿನ ಜನನವಾಗಿದ್ದಕ್ಕಾಗಿ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು. ವ್ಯಾನ್ಸ್ ದಂಪತಿ ಜುಲೈ ೧೯ ರಂದು ತಮ್ಮ ನಾಲ್ಕನೇ ಮಗು ‘ಅಲೆಕ್ ನೀಲ್ ವ್ಯಾನ್ಸ್’ ಜನನವನ್ನು ಘೋಷಿಸಿದ್ದರು. ಅಧಿಕಾರದಲ್ಲಿರುವ ಅಮೆರಿಕದ ಉಪಾಧ್ಯಕ್ಷರಿಗೆ ಮಗು ಜನಿಸಿರುವುದು ಕಳೆದ ೧೫೦ ವರ್ಷಗಳಲ್ಲೇ ಇದೇ ಮೊದಲಾಗಿದೆ.
ಅಮೆರಿಕದ ನಿಯೋಜಿತ ವ್ಯಾಪಾರ ನೀತಿಗಳು ಹಾಗೂ ಸುಂಕಗಳ ಕುರಿತು ದ್ವಿಪಕ್ಷೀಯ ಮಧ್ಯಂತರ ಒಪ್ಪಂದಕ್ಕಾಗಿ ಎರಡೂ ದೇಶಗಳು ಚರ್ಚೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಫೋನ್ ಕರೆ ಮಹತ್ವ ಪಡೆದುಕೊಂಡಿದೆ.

































