
ಜೆಡಿಎಸ್-ಬಿಜೆಪಿಯಿಂದ ಪಾದಯಾತ್ರೆ, ಸರ್ಕಾರದ ವಿರುದ್ಧ ದೋಸ್ತಿ ಸಮರ
ಬೆಂಗಳೂರು, ಆ. ೯- ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರುವ ಮೂಲಕ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿತು. ಯಾವುದೇ ಕಾರಣಕ್ಕೂ ಬಿಡದಿಯಲ್ಲಿ ಟೌನ್‌ಶಿಪ್ ಮಾಡಲು ಬಿಡುವುದಿಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸರ್ಕಾರಕ್ಕೆ ತಿರುಗೇಟು ನೀಡಿದರು.
ಬಿಡದಿಯ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂಪಾರ್ಕ್ ವರೆಗೆ ಜೆಡಿಎಸ್-ಬಿಜೆಪಿ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮೂರು ದಿನಗಳ ಪಾದಯಾತ್ರೆಗೆ ಬೈರಮಂಗಲದಲ್ಲಿಂದು ಚಾಲನೆ ನೀಡಿದರು.
ಕೇಂದ್ರ ಸಚಿವ ಕುಮಾರ್ ಸ್ವಾಮಿ ಮಾತನಾಡಿ ಟೌನ್ ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಆದರೆ ಈ ಯೋಜನೆಗೆ ತಮ್ಮ ಸರ್ಕಾರ ಒಪ್ಪಿಗೆ ನೀಡಿರಲಿಲ್ಲೆ ಎಂದು ಸ್ಪಷ್ಟಪಡಿಸಿದರು.

೨೦೦೬ ರಲ್ಲಿ ಬೆಂಗಳೂರು, ಮೈಸೂರು ಕಾರಿಡಾರ್ ಯೋಜನೆ ವೇಳೆ ೫ ಟೌನ್ ಶಿಪ್ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಈ ಪ್ರಸ್ತಾಪ ಮಾಡಲಾಗಿತ್ತು. ಆದರೆ ಜೆಡಿಎಸ್ ಆಗಲಿ, ಅಥವಾ ಬಿಜೆಪಿ ಸರ್ಕಾರವಾಗಲಿ ಈ ಯೋಜನೆಗೆ ಅನುಮತಿ ನೀಡಿರಲಿಲ್ಲ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿಂದಿನ ಸರ್ಕಾರದ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳುವ ಮೂಲಕ ಅಧಿಸೂಚನೆ ಹೊರಡಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ , ಬಿಜೆಪಿ ಕೈಗೊಂಡಿರುವ ಈ ಪಾದಯಾತ್ರೆ ರಾಜಕೀಯ ಸ್ವಾರ್ಥಕ್ಕಾಗಿ ಅಲ್ಲ. ಈ ಭಾಗದ ರೈತರು, ರೈತ ಮಹಿಳೆಯರು ಕಳೆದ ೫೧೬ ದಿನಗಳಿಂದ ಕಾಂಗ್ರೆಸ್ ಸರ್ಕಾರ ಬಿಡದಿ ಟೌನ್‌ಶಿಪ್ ಮುಂದಾಗಿರುವ ನಿಲುವನ್ನು ಖಂಡಿಸಿ ನಿಂತರವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲೂ ಈ ಭಾಗದ ರೈತರ ಜಮೀನನ್ನು ಉಳಿಸಲು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡುವ ಮೂಲಕ ಸರ್ಕಾರ ರಿಯಲ್ ಎಸ್ಟೇಟ್ ಯಾವುದೇ ಕಾರಣಕ್ಕೂ ಈ ಯೋಜನೆ ಕಾರ್ಯಗತಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ರಿಯಲ್ ಎಸ್ಟೇಟ್ ದಂಧೆ ರೈತ ಹಾಗೂ ಜನವಿರೋಧಿ ನಿಲುವು ತಳೆದಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಅಶೋಕ್ ಟೀಕಾಪ್ರಹಾರ ನಡೆಸಿದರು. ಇದೇ ವಿಚಾರ ಮುಂದಿಟ್ಟುಕೊಂಡು ವಿಧಾನಸಭೆಯ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ಅಶೋಕ್ ಹೇಳಿದರು.
ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರ್ ಸ್ವಾಮಿ ಮಾತನಾಡಿ, ಬಿಡದಿ ಟೌನ್‌ಶಿಪ್ ನಿರ್ಮಾಣ ಮಾಡಲು ಹೊರಟಿರುವ ರಾಜ್ಯಸರ್ಕಾರ ರಿಯಲ್ ಎಸ್ಟೇಟ್ ದಂಧೆಗೆ ಮುಂದಾಗಿದೆ. ಇದು ರೈತರ ಬದುಕಿನ ಪ್ರಶ್ನೆಯಾಗಿದ್ದು ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮರಣ ಶಾಸನ ಬರೆಯಲು ಹೊರಟಿದೆ ಎಂದು ಕಿಡಿಕಾರಿದರು.
ರೈತರ ಫಲವತ್ತಾದ ಜಮೀನು ಉಳಿಸಲು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಕೊನೆಯುಸಿರಿರುವತನಕ ಹೋರಾಟ ಮಾಡಲಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸರ್ಕಾರ ಪರಿಶೀಲನೆ ಸಮಿತಿ ರಚನೆ ಮಾಡಿತ್ತು. ಈ ಅಂಶಗಳನ್ನು ಗಮನಿಸಿದರೆ ಧ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಇಂದು ಬೈರಮಂಗಲದಿಂದ ಬಿಡದಿಯ ಹೊರಗೆ ೮ ರಿಂದ ೯ ಕಿ.ಮೀ. ಪಾದಯಾತ್ರೆ ಮಾಡಿ ಮಧ್ಯಾಹ್ನ ಜೋಗರದೊಡ್ಡಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಬೆಳಿಗ್ಗೆ ಬಿಡದಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ೨ನೇ ದಿನದ ಪಾದಯಾತ್ರೆಗೆ ಚಾಲನೆ ದೊರೆಯಲಿದೆ.
ಮೈಸೂರು ರಸ್ತೆ-ನೈಸ್ ಜಂಕ್ಷನ್ ವರೆಗೆ ೧೪ ಕಿ.ಮೀ. ಕಾಲ್ನಡಿಗೆ ನಡೆಯಲಿದೆ. ಶೇಷಗಿರಿ ಟೋಲ್ ಪ್ಲಾಜಾ ಬಳಿಯ ಎಂಸಿವಿ ಕನ್ವೆನ್ಷನ್ ಹಾಲ್‌ನಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಜೆ.ಕೆ. ಗ್ರ್ಯಾಂಡ್‌ನಲ್ಲಿ ವಾಸ್ತವ್ಯ ಹೂಡಲಾಗುತ್ತದೆ.
ಆ. ೧೧ ರಂದು ನೈಸ್ ರಸ್ತೆ ಜಂಕ್ಷನ್‌ನಿಂದ ಹೊರಡುವ ಪಾದಯಾತ್ರೆ ಮಧ್ಯಾಹ್ನ ಫ್ರೀಡಂ ಪಾರ್ಕ್ ತಲುಪಲಿದೆ.































