
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ. 09: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಡಿಸಿಸಿಐ) ನೇತೃತ್ವದಲ್ಲಿ ಬಳ್ಳಾರಿ ನಗರ ಹಮಾಲರ ಸಂಘ, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ನಡೆಸಿದ ನಿರಂತರ ಸಮಾಲೋಚನೆಯ ಫಲವಾಗಿ ಹಮಾಲಿಗಳ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಪರಿಷ್ಕೃತ ಕೂಲಿ ದರದ ಒಪ್ಪಂದಕ್ಕೆ ಶನಿವಾರ ಸಹಿ ಹಾಕಲಾಯಿತು.
ಬಿಡಿಸಿಸಿಐ ಅಧ್ಯಕ್ಷ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಬಳ್ಳಾರಿ ನಗರ ಹಮಾಲರ ಸಂಘದ ಅಧ್ಯಕ್ಷ ಎಂ. ರವಿಪ್ರಸಾದ್ ಅವರು ಹಮಾಲಿಗಳನ್ನು ಪ್ರತಿನಿಧಿಸಿ ಪರಿಷ್ಕೃತ ದರಪಟ್ಟಿಗೆ ಸಹಿ ಹಾಕಿದರು.
ಪರಿಷ್ಕೃತ ದರ ಒಪ್ಪಂದವು 2026ರ ಆಗಸ್ಟ್ 15ರಿಂದ 2029ರ ಜೂನ್ 30ರವರೆಗೆ ಜಾರಿಯಲ್ಲಿರಲಿದೆ. ಈ ಒಪ್ಪಂದದಿಂದ ಹಮಾಲಿಗಳು, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳ ನಡುವೆ ಉತ್ತಮ ಸಮನ್ವಯ, ಪರಸ್ಪರ ಸಹಕಾರ ಮತ್ತು ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲಿದೆ ಎಂದು ಸಭೆಯಲ್ಲಿ ಆಶಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಡಿಸಿಸಿಐ ಅಧ್ಯಕ್ಷ ಅವ್ವಾರು ಮಂಜುನಾಥ್, ಹಮಾಲಿಗಳು, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಚರ್ಚೆ ಮತ್ತು ಸಮಾಲೋಚನೆಯ ಮೂಲಕ ಪರಿಷ್ಕೃತ ದರವನ್ನು ನಿಗದಿಪಡಿಸಲಾಗಿದೆ. ಎಲ್ಲರೂ ಒಪ್ಪಂದದ ನಿಯಮಗಳನ್ನು ಪಾಲಿಸುವ ಮೂಲಕ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಬಿಡಿಸಿಸಿಐ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಮಾತನಾಡಿ, ಹಮಾಲರು, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳ ನಡುವೆ ಸೌಹಾರ್ದತೆ ಅತ್ಯಂತ ಅಗತ್ಯವಾಗಿದೆ. ಪರಸ್ಪರ ಹೊಂದಾಣಿಕೆ ಅನಿವಾರ್ಯವಾಗಿದ್ದು, ದೈನಂದಿನ ವ್ಯವಹಾರಗಳಲ್ಲಿ ಎಲ್ಲರೂ ತಾಳ್ಮೆ, ಶಿಸ್ತು ಮತ್ತು ಸಮಾಧಾನದಿಂದ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪರಿಷ್ಕೃತ ಹಮಾಲಿ ದರ ಒಪ್ಪಂದವು ಪೂರಕವಾಗಲಿದೆ ಎಂದು ಹೇಳಿದರು.
ಬಳ್ಳಾರಿ ನಗರ ಹಮಾಲರ ಸಂಘದ ಅಧ್ಯಕ್ಷ ಎಂ. ರವಿಪ್ರಸಾದ್ ಮಾತನಾಡಿ, ಪರಿಷ್ಕೃತ ದರಪಟ್ಟಿಯ ಪ್ರಕಾರ ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ಹಮಾಲಿಗಳಿಗೆ ಕೂಲಿ ಪಾವತಿಸಬೇಕು. ಹಮಾಲರು, ವ್ಯಾಪಾರಿಗಳು ಮತ್ತು ಉದ್ಯಮಿಗಳು ಪರಸ್ಪರ ಸಹಕಾರ, ತಾಳ್ಮೆ ಹಾಗೂ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವ ಮೂಲಕ ಉತ್ತಮ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬಿಡಿಸಿಸಿಐ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಸೊಂತ ಗಿರಿಧರ ಹಾಗೂ ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ ಹಾಗೂ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಮಾಜಿ ಅಧ್ಯಕ್ಷರಾದ ಬಿ. ಮಹಾರುದ್ರಗೌಡ, ಸಿ. ಶ್ರೀನಿವಾಸ್‌ರಾವ್ ಹಾಗೂ ಡಾ. ಡಿ.ಎಲ್. ರಮೇಶ್ ಗೋಪಾಲ್, ದಲ್ಲಾಲಿ ವರ್ತಕರ ಸಂಘದ ಕಾರ್ಯದರ್ಶಿ ಗುರುಸ್ವಾಮಿ, ಎಫ್‌ಎಂಸಿಜಿ ಪ್ರತಿನಿಧಿ ಕಿಶೋರ್, ಗಾಯತ್ರಿ ಎಂಟರ್‌ಪ್ರೈಸಸ್‌ನ ಪರಮೇಶ್ವರಪ್ಪ, ವರ್ತಕರಾದ ರಮೇಶ್, ಫರ್ಟಿಲೈಸರ್ಸ್ ಸಂಘದ ಪದಾಧಿಕಾರಿಗಳು, ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಸತ್ಯನಾರಾಯಣ, ಡಿಸ್ಟ್ರಿಬ್ಯೂಷನ್ ಅಸೋಸಿಯೇಷನ್‌ನ ನರೇಂದ್ರ, ಮೂಕಾಂಬಿಕಾ ಎಂಟರ್‌ಪ್ರೈಸಸ್‌ನ ಶ್ರೀನಿವಾಸ್, ಹಮಾಲರ ಸಂಘದ ಮೇಸ್ತ್ರಿಗಳಾದ ಬಿ. ಸುಂಕಣ್ಣ, ಬಿ. ಆಂಜನೇಯಲು, ಬಿ. ಕೃಷ್ಣ ಹಾಗೂ ಬಿ. ಅಂಜಿನಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು































