
ರಿಯೋ ಡಿ ಜನೇರೋ,ಆ.9-ಬ್ರೆಜಿಲ್‍ನ ಪ್ರಸಿದ್ಧ ಪ್ರವಾಸಿ ತಾಣ ರಿಯೋ ಡಿ ಜನೇರೋದ ಟಿಜುಕಾ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಪೈಕಿ ಮೂವರು ಕೊಲಂಬಿಯಾ ದೇಶದ ಮಹಿಳಾ ಪ್ರವಾಸಿಗರು ಹಾಗೂ ಮತ್ತೊಬ್ಬರು ಹೆಲಿಕಾಪ್ಟರ್ ಪೈಲಟ್ ಎಂದು ತಿಳಿದುಬಂದಿದೆ.
ಟಿಜುಕಾ ಅರಣ್ಯ ಪ್ರದೇಶದ ಕಡಿದಾದ ಬೆಟ್ಟದ ಮೇಲೆ ಹೆಲಿಕಾಪ್ಟರ್ ಪತನಗೊಂಡ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದರಿಂದ ನಾಲ್ವರೂ ಸಜೀವ ದಹನಗೊಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಪ್ರದೇಶವು ದಟ್ಟವಾದ ಕಾಡಿನಿಂದ ಆವೃತವಾಗಿದ್ದು, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಲು ತೀವ್ರ ಶ್ರಮವಹಿಸಬೇಕಾಯಿತು. `ವಿಸ್ಟಾ ಚೈನೀಸಾ’ ಎಂಬ ಪ್ರಸಿದ್ಧ ಪ್ರವಾಸಿ ತಾಣದ ಸಮೀಪ ಈ ದುರಂತ ಸಂಭವಿಸಿದೆ. ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ.
ಈ ಘಟನೆಯ ಬೆನ್ನಲ್ಲೇ, ನಗರದಲ್ಲಿ ಹೆಲಿಕಾಪ್ಟರ್ ಹಾರಾಟದ ಸುರಕ್ಷತಾ ಮಾರ್ಗಸೂಚಿಗಳನ್ನು ತಕ್ಷಣವೇ ಬಿಗಿಗೊಳಿಸುವಂತೆ ರಿಯೋ ಡಿ ಜನೇರೋ ಮೇಯರ್ ಎಡ್ವರ್ಡೋ ಕಾವಾಲಿಯರ್ ಬ್ರೆಜಿಲ್‍ನ ಸಿವಿಲ್ ಏವಿಯೇಷನ್ ಏಜೆನ್ಸಿಗೆ ಮನವಿ ಮಾಡಿದ್ದಾರೆ.































