Home ಮುಖಪುಟ ಸುದ್ದಿ ಟೌನ್‌ಶಿಪ್ ಹೆಸರಲ್ಲಿ ಲೂಟಿ: ಹೆಚ್‌ಡಿಕೆ ಕಿಡಿ

ಟೌನ್‌ಶಿಪ್ ಹೆಸರಲ್ಲಿ ಲೂಟಿ: ಹೆಚ್‌ಡಿಕೆ ಕಿಡಿ

ಮೈಸೂರು ಆ.೯-ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ದುಡ್ಡು ಲೂಟಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.


ಮೈಸೂರು ಚಾಮುಂಡಿ ಬೆಟ್ಟದಲ್ಲಿ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನಗೆ ಇದರಲ್ಲಿ ಯಾವುದೇ ಹಠ ಇಲ್ಲ. ಬಹುಶಃ ಅವರಿಗೆ ಹಠ ಇರಬೇಕು. ಬಿಡದಿ ಟೌನ್‌ಶಿಪ್ ಹೆಸರಲ್ಲಿ ದುಡ್ಡು ಲೂಟಿ ಹೊಡೆಯುವ ಸ್ಕೀಮ್ ಇದು. ನಾನು ಕಿಕ್ ಬ್ಯಾಕ್ ಪಡೆದಿದ್ದರೆ ತನಿಖೆ ಮಾಡಲಿ. ನನ್ನನ್ನಾಗಲಿ ದೇವೇಗೌಡರನ್ನಾಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ” ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.


“ನಾನು ಲಾಟರಿ ಬ್ಯಾನ್ ಮಾಡಿದಾಗ ತಮಿಳುನಾಡಿನಿಂದ ಬ್ಯಾಗ್ ಹಿಡಿದುಕೊಂಡು ಬಂದಿದ್ದು ಯಾರು” ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.


ಬಿಡದಿ ಟೌನ್‌ಶಿಪ್ ಯೋಜನೆ ಯಾವ ಕಾರಣಕ್ಕೂ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, “ರೈತರು, ಹೆಣ್ಣುಮಕ್ಕಳು ಭದ್ರವಾಗಿದ್ದರೆ ಬಿಡದಿ ಟೌನ್‌ಶಿಪ್ ಆಗಲ್ಲ. ಕೆಟ್ಟ ಭ್ರಷ್ಟ ಸರ್ಕಾರಕ್ಕೆ ತಿರುಗೇಟು ಕೊಡಲು ನಮ್ಮ ಶಾಸಕರು ಸಿದ್ಧರಿದ್ದಾರೆ” ಎಂದು ತಿಳಿಸಿದರು.


ವಿಪಕ್ಷಗಳಿಗೆ ಮಾನ್ಯತೆ ಇಲ್ಲ ಎಂದ ಆರೋಪ
ವಿಪಕ್ಷಗಳು ಮಾತನಾಡಿದರೆ ಗೌರವ ಕೊಡುತ್ತಿಲ್ಲ. ಅಧಿಕಾರದ ಮದದಿಂದ ವಿಪಕ್ಷಗಳಿಗೆ ಮಾನ್ಯತೆ ಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ದೂರಿದರು. “ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಿಸಿದಿರಿ. ಅವರಿಗೆ ಪರ್ಯಾಯ ಮಾರ್ಗ ಕೊಟ್ಟಿರಾ? ಕೃಷ್ಣ ಬೈರೇಗೌಡ ಅವರು ನಾನು ಖರೀದಿ ಮಾಡಿದ ಜಾಗ ಒತ್ತುವರಿ ಎಂದು ಆರೋಪಿಸಿ ಎಸ್‌ಐಟಿ ಕೂಡ ರಚನೆ ಮಾಡಿದರು. ಇನ್ನು ಒಂದೂವರೆ ವರ್ಷ ಅಧಿಕಾರ ಮಾತ್ರ ಬಾಕಿ ಇರುವುದು. ಮುಂದಿನ ಚುನಾವಣೆಯಲ್ಲಿ ಸರ್ವನಾಶವಾಗುತ್ತೀರಾ ಹುಷಾರ್” ಎಂದು ಎಚ್ಚರಿಸಿದರು.

ನೈಸ್ ರೋಡ್ ಟೋಲ್ ವಿಚಾರ
ನೈಸ್ ರೋಡ್‌ನಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, “ಇದನ್ನು ರಾಜ್ಯ ಸರ್ಕಾರದ ಪರ ವಾದ ಮಂಡಿಸಿರುವ ವಕೀಲರೇ ಹೇಳಿದ್ದಾರೆ. ಹೀಗಾಗಿ ನಾನು ರೈತರಿಗೆ ಟೋಲ್ ಕಟ್ಟಬೇಡಿ ಎಂದು ಹೇಳಿದ್ದೇನೆ. ಪ್ರಿಯಾಂಕ್ ಖರ್ಗೆ ಅವರು ಸ್ಪರ್ಧೆಯಲ್ಲಿ ಮಾತನಾಡುತ್ತಾರೆ. ಟೋಲ್ ಸಂಗ್ರಹ ಮಾಡುತ್ತಿರುವುದು ಕೇಂದ್ರ ಸರ್ಕಾರ ಎಂದು ಹೇಳುತ್ತಾರೆ. ಯಾರು ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂಬ ಬಗ್ಗೆ ಅರಿವಿರಲಿ. ಕೆಲ ಸಚಿವರನ್ನು ಕುಮಾರಸ್ವಾಮಿ, ಜೆಡಿಎಸ್ ಬೈಯಲು ಇಟ್ಟುಕೊಂಡಿದ್ದಾರೆ” ಎಂದು ಹೇಳಿದರು.

ಯೋಜನೆಗಳಿಂದ ಲೂಟಿ ಎಂದ ಆರೋಪ
“ಯೋಜನೆಗಳಿಂದ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಜನರು ನಂಬುವ ಹಾಗೆ ಜಾಹೀರಾತು ಕೊಡಿ. ಬಿಡದಿ ಭೂಮಿ ಫಲವತ್ತಾದ ಭೂಮಿ ಎಂದು ಕಾಂಗ್ರೆಸ್ ಸದನ ಸಮಿತಿ ವರದಿಯಲ್ಲಿಯೇ ಇದೆ. ಬಿಡದಿ ಪ್ರಾಜಕ್ಟ್ ನಿಲ್ಲಿಸುವ ಬಗ್ಗೆ ನಾನೇ ಸದನದಲ್ಲಿ ಹೇಳಿದ್ದೇನೆ. ಈಗ ಅದನ್ನೇ ಲೂಟಿ ಹೊಡೆಯಲು ಹೊರಟಿದ್ದಾರೆ. ಇದೇ ಡಿ.ಕೆ. ಶಿವಕುಮಾರ್ ಸದನ ಸಮಿತಿಯಲ್ಲಿ ಇದ್ದರು. ನಾನು ದಾಖಲೆಗಳೊಂದಿಗೆ ಆರೋಪ ಮಾಡುತ್ತಿದ್ದೇನೆ” ಎಂದು ಕುಮಾರಸ್ವಾಮಿ ತಿಳಿಸಿದರು.

ಯುವ ಜೆಡಿಎಸ್ ಪಾದಯಾತ್ರೆ
ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿಯಲ್ಲಿ ಯುವ ಜೆಡಿಎಸ್ ಪಾದಯಾತ್ರೆ ನಡೆಯುತ್ತಿದೆ. “ಪಾದಯಾತ್ರೆ ನನ್ನದಲ್ಲ, ಇದು ಯುವ ಜೆಡಿಎಸ್ ನವರದ್ದು. ಪಾದಯಾತ್ರೆಯಲ್ಲಿ ನಮ್ಮ ಶಾಸಕರು ಭಾಗಿಯಾಗುತ್ತಿದ್ದಾರೆ” ಎಂದು ಅವರು ಹೇಳಿದರು.