
*ರಾಜ್ಯ ಕಾಂಗ್ರೆಸ್ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಕುರಿತುಬಿಜೆಪಿ ಟೀಕೆ;
*ಶೀಘ್ರವೇ ಮಹಿಳಾ ನಾಯಕಿಗೆ ಮಮಂತ್ರಿಗಿರಿ ನೀಡುವ ಸುಳಿವು ನೀಡಿದ ಸಿಎಂ
ಬೆಂಗಳೂರು(ನವದೆಹಲಿ):ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ವಿಪಕ್ಷಗಳ ವಾಗ್ದಾಳಿ ಬೆನ್ನಲ್ಲೇ, ರಾಜ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನವದೆಹಲಿಗೆ ತೆರಳಿದ್ದಾರೆ.
ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರ ಜೊತೆ ಅವರು ಸಭೆ ನಡೆಸಲಿದ್ದು, ಖಾತೆ ಹಂಚಿಕೆ ಹಾಗೂ ಸಂಪುಟದ ಖಾಲಿ ಇರುವ ಒಂದು ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಮಹಿಳೆಯರ ಅಭಿವ್ಯಕ್ತಿ ಮತ್ತು ಭಾಗವಹಿಸುವಿಕೆ ಇಲ್ಲದೆ ಯಾವುದೇ ದೇಶ ಯಶಸ್ವಿಯಾಗಲು ಸಾಧ್ಯವಿಲ್ಲ. ೨೦೨೩ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಡಿಲಿಮಿಟೇಶನ್ (ಕ್ಷೇತ್ರ ಪುನರ್ವಿಂಗಡಣೆ) ಷರತ್ತಿಲ್ಲದೆ ತಕ್ಷಣವೇ ಜಾರಿಗೊಳಿಸಬೇಕು” ಎಂದು ಪ್ರತಿಪಾದಿಸಿದ್ದರು.
ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು, “ಕರ್ನಾಟಕದ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಸಚಿವರಿಲ್ಲ! ೩೩% ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ನೈಜ ನಿಲುವು ಏನು?” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
ಕೇಂದ್ರ ಸಚಿವರ ಟೀಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಮ್ಮ ಸರ್ಕಾರದಲ್ಲಿ ಮಹಿಳೆಯರಿಗೆ ಖಂಡಿತವಾಗಿಯೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿದೆ. ಕಾಂಗ್ರೆಸ್ ಪಕ್ಷವು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ. ಈ ವಿಷಯದಲ್ಲಿ ರಿಜಿಜು ಅವರು ಕಾಂಗ್ರೆಸ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ,” ಎಂದು ತಿರುಗೇಟು ನೀಡಿದ್ದಾರೆ.
ಆಗಸ್ಟ್ ೩ ರಂದು ನಡೆದ ಸಂಪುಟ ವಿಸ್ತರಣೆಯಲ್ಲಿ ೧೯ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಸ್ತುತ ಸಂಪುಟದ ಒಟ್ಟು ಬಲ ೩೩ಕ್ಕೆ ಏರಿದೆ. ಸಂವಿಧಾನಾತ್ಮಕ ಮಿತಿ ೩೪ ಆಗಿರುವುದರಿಂದ, ಇನ್ನು ೧ ಸಚಿವ ಸ್ಥಾನ ಖಾಲಿಯಿದೆ. ಈ ಸ್ಥಾನವನ್ನು ಮಹಿಳಾ ನಾಯಕಿಗೆ ನೀಡಲು ಹೈಕಮಾಂಡ್ ಮಟ್ಟದಲ್ಲಿ ಕೌಂಟ್‌ಡೌನ್ ವಾಗಿದೆ.
ಮಂತ್ರಿಗಿರಿ ರೇಸ್‌ನಲ್ಲಿರುವ ಪ್ರಮುಖ ಮಹಿಳಾ ನಾಯಕಿಯರು:
ಗಾಯತ್ರಿ ಶಾಂತೇಗೌಡ (ವಿಧಾನ ಪರಿಷತ್ ಸದಸ್ಯೆ): ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದ ಗಾಯತ್ರಿ ಶಾಂತೇಗೌಡ ಅವರ ಹೆಸರು ಮುಂಚೂಣಿಯಲ್ಲಿದೆ.
*ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ ಶಾಸಕಿ): ಸಿದ್ದರಾಮಯ್ಯ ಅವರ ಸರ್ಕಾರದ ಸಂಪುಟದಲ್ಲಿದ್ದ ಏಕೈಕ ಮಹಿಳಾ ಸಚಿವೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಮತ್ತೆ ಅವಕಾಶ ಸಿಗುವ ಸಾಧ್ಯತೆಯಿದೆ.
*ರೂಪಕಲಾ ಶಶಿಧರ್ (ಕೆ.ಜಿ.ಎಫ್. ಶಾಸಕಿ): ಕೋಲಾರ ಜಿಲ್ಲೆಯ ಕೆಜಿಎಫ್ ಶಾಸಕಿ ರೂಪಕಲಾ ಅವರ ಹೆಸರೂ ಪರಿಶೀಲನೆಯಲ್ಲಿದೆ.
*ಕನೀಜ್ ಫಾತಿಮಾ (ಗುಲ್ಬರ್ಗ ಉತ್ತರ ಶಾಸಕಿ): ಕಲ್ಯಾಣ ಕರ್ನಾಟಕ ಭಾಗದಿಂದ ಕನೀಜ್ ಫಾತಿಮಾ ಅವರ ಹೆಸರು ಕೇಳಿಬರುತ್ತಿದೆ.
*ಆರತಿ ಕೃಷ್ಣ (ವಿಧಾನ ಪರಿಷತ್ ಸದಸ್ಯೆ): ಒಐಅ ಆರತಿ ಕೃಷ್ಣ ಅವರೂ ಕೂಡ ರೇಸ್‌ನಲ್ಲಿದ್ದಾರೆ.
ಆಗಸ್ಟ್ ೧೩ ರಿಂದ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.































