Home ಜಿಲ್ಲೆ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಜನರಿಗೆ ಸಂಕಷ್ಟ

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಜನರಿಗೆ ಸಂಕಷ್ಟ

ಯಾದಗಿರಿ: ನಗರದ ಸರ್ಕಾರಿ ಪದವಿ ಕಾಲೇಜಿನಿಂದ ಗ್ರಾಮೀಣ ಪೊಲೀಸ್ ಠಾಣೆವರೆಗೆ ನಡೆಯುತ್ತಿರುವ ರಸ್ತೆ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿ ಮತ್ತು ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ಎನ್. ಭೀಮುನಾಯಕ್ ಆರೋಪಿಸಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಮಗಾರಿ ಆರಂಭಗೊAಡು ಹಲವು ದಿನಗಳಾದರೂ ನಿರೀಕ್ಷಿತ ವೇಗದಲ್ಲಿ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು. ರಸ್ತೆ ಬದಿಯಲ್ಲಿ ನಿರ್ಮಾಣ ಸಾಮಗ್ರಿ ಹಾಗೂ ಮಣ್ಣಿನ ರಾಶಿ ತೆರವುಗೊಳಿಸದೇ ಬಿಟ್ಟಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ಹೇಳಿದರು.

ಪಾದಚಾರಿ ಮಾರ್ಗ ನಿರ್ಮಾಣದ ವೇಳೆ ಮಳೆನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಹಾಗೂ ಚರಂಡಿ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಳ್ಳದೇ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ನೀರು ನಿಂತು ಸಾರ್ವಜನಿಕರಿಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ರಸ್ತೆ ವ್ಯಾಪ್ತಿಯಲ್ಲಿನ ಕೆಲವು ಕಟ್ಟಡಗಳು ಮತ್ತು ಅಂಗಡಿಗಳ ಮುಂಭಾಗದ ಅತಿಕ್ರಮಣ ತೆರವುಗೊಳಿಸದಿರುವುದು ಕೂಡ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಸಂಬAಧಿತ ಇಲಾಖೆಗಳು ಈ ಕುರಿತು ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಂಡು ರಸ್ತೆ ವಿಸ್ತರಣೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ರಸ್ತೆ ಬದಿಯಲ್ಲಿ ಅಸ್ತವ್ಯಸ್ತವಾಗಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದೆ. ಸಂಚಾರ ಪೊಲೀಸರು ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕ್ರಮ ಜರುಗಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟದ ಮಾರ್ಗ ಅನುಸರಿಸಲಾಗುವುದು ಎಂದು ಟಿ.ಎನ್. ಭೀಮುನಾಯಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಲ್ಲು ಮಾಳೀಕೇರಿ, ಸಿದ್ದು ನಾಯಕ ಹತ್ತಿಕುಣಿ, ಸಂತೋಷ ನಿರ್ಮಲ್ಕರ್, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಕುಣಿ, ಅಂಬ್ರೇಶ್ ಹತ್ತಿಮನಿ, ಅಶೋಕ ನಾಯಕ ಹಾಗೂ ಬಸವರಾಜ ಜಗನ್ನಾಥ್ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದರು.