Home ಜಿಲ್ಲೆ ಸಮವಸ್ತ್ರ ಶಿಸ್ತು, ಸಮಾನತೆ ಮತ್ತು ಜವಾಬ್ದಾರಿಯ ಸಂಕೇತ: ವಾಯುಸೇನೆ ಕಮಾಂಡರ್ ವಿ.ಎನ್.ಎಲ್. ರೆಡ್ಡಿ

ಸಮವಸ್ತ್ರ ಶಿಸ್ತು, ಸಮಾನತೆ ಮತ್ತು ಜವಾಬ್ದಾರಿಯ ಸಂಕೇತ: ವಾಯುಸೇನೆ ಕಮಾಂಡರ್ ವಿ.ಎನ್.ಎಲ್. ರೆಡ್ಡಿ

ಬೀದರ್:ಜು.12: ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ (ರಿ) ಸಂಚಾಲಿತ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಮವಸ್ತ್ರ ದಿನಾಚರಣೆಯನ್ನು ಸಂಭ್ರಮ ಹಾಗೂ ಶಿಸ್ತಿನಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಸಮಾನತೆ, ಶಿಸ್ತು, ಜವಾಬ್ದಾರಿ ಮತ್ತು ರಾಷ್ಟ್ರಪ್ರೇಮದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆ ಬೀದರದ ಕಮಾಂಡರ್ ವಿ.ಎನ್.ಎಲ್. ರೆಡ್ಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಾನು ಈ ಕಾರ್ಯಕ್ರಮದ ಅತಿಥಿಯಲ್ಲ, ಸಮವಸ್ತ್ರ ಧರಿಸಿರುವ ಕಾರಣ ಈ ಕಾರ್ಯಕ್ರಮದ ಒಂದು ಭಾಗವಾಗಿದ್ದೇನೆ” ಎಂದು ಹೇಳಿ, ಸಮವಸ್ತ್ರವು ಕೇವಲ ಉಡುಗೆಯಲ್ಲ; ಅದು ಸಮಾನತೆ, ಶಿಸ್ತು, ಕರ್ತವ್ಯಪ್ರಜ್ಞೆ ಮತ್ತು ಗೌರವದ ಪ್ರತೀಕವಾಗಿದೆ ಎಂದು ತಿಳಿಸಿದರು. ಸಮಾಜದ ಯಾವುದೇ ವರ್ಗದಿಂದ ಬಂದವರಾಗಿದ್ದರೂ ಸಮವಸ್ತ್ರ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಬೆಳೆಸುತ್ತದೆ. ವ್ಯಕ್ತಿತ್ವ ನಿರ್ಮಾಣದಲ್ಲಿ ಸಮವಸ್ತ್ರದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆಯುತ್ತಿರುವುದನ್ನು ಸದುಪಯೋಗಪಡಿಸಿಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ಯಾವುದೇ ಕೆಲಸ ಮಾಡುವಾಗ ಸರಿ-ತಪ್ಪುಗಳ ಬಗ್ಗೆ ಚಿಂತನೆ ನಡೆಸಿ ಉತ್ತಮ ಕರ್ಮವನ್ನು ಆಯ್ಕೆ ಮಾಡಬೇಕು. ಜೀವನದಲ್ಲಿ ಒಗ್ಗಟ್ಟು, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಬೀದರ್ ಜಿಲ್ಲೆ ದೇಶದಲ್ಲಿಯೇ ಯುದ್ಧ ವಿಮಾನ ಚಾಲಕರನ್ನು (ಫೈಟರ್ ಪೈಲಟ್‍ಗಳನ್ನು) ತರಬೇತುಗೊಳಿಸುವ ವಿಶಿಷ್ಟ ಕೇಂದ್ರವಾಗಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ದೇಶ ಸೇವೆಗೆ ಸಿದ್ಧರಾಗಬೇಕು. ಭವಿಷ್ಯದಲ್ಲಿ ತಮ್ಮ ಕಾರ್ಯಗಳ ಮೂಲಕ ದೇಶ, ಸಮಾಜ ಹಾಗೂ ಶಾಲೆಗೆ ಕೀರ್ತಿ ತರುವಂತಹ ಸಾಧನೆ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪೆÇ್ರ. ಎಸ್.ಬಿ. ಸಜ್ಜನಶೆಟ್ಟಿ ಮಾತನಾಡಿ, ಸಮವಸ್ತ್ರವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸುತ್ತದೆ. ಸಮಾಜದ ವಿವಿಧ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸಮಾನವಾಗಿ ಕಾಣುವಂತೆ ಮಾಡುವುದು ಸಮವಸ್ತ್ರದ ಮಹತ್ವವಾಗಿದೆ ಎಂದರು.

ಜೀವನದಲ್ಲಿ ಉನ್ನತ ಗುರಿ ಹೊಂದಿ ನಿರಂತರ ಪರಿಶ್ರಮದಿಂದ ಮುನ್ನಡೆದರೆ ಯಾವುದೇ ಕ್ಷೇತ್ರದಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಥ್ರ್ಯವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಹನುಮಂತರಾವ ಪಾಟೀಲ ಉಪಸ್ಥಿತರಿದ್ದರು. ಸಹಶಿಕ್ಷಕಿ ಅರುಣಾಕುಮಾರಿ ಪಾಟೀಲ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಇಂದುಮತಿ ಮೇತ್ರೆ ದೇಶಭಕ್ತಿಗೀತೆ ಹಾಡಿದರು. ಮುಖ್ಯಗುರು ಊರ್ಮಿಳಾ ಬಕ್ಷಿ ವಂದನಾರ್ಪಣೆ ಸಲ್ಲಿಸಿದರು. ದೈಹಿಕ ಶಿಕ್ಷಕ ನಾಮದೇವ ರಾಠೋಡ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾಮೂಹಿಕ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.