Home ಜಿಲ್ಲೆ ಕಲಬುರಗಿ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ವೈಭವದ ರಂಗು

ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ವೈಭವದ ರಂಗು

ಕಲಬುರಗಿ,ನ.25: ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವೈಭವ – ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಬ್ಯಾಂಕ್ ವಿಶ್ರಾಂತ ಅಧಿಕಾರಿ ಮಹಾದೇವಯ್ಯ ಕರದಳ್ಳಿ ಹಾಗೂ ಪ್ರಾಂಶುಪಾಲ ಶಂಕರಗೌಡ ಹೊಸಮನಿ, ವಿಭಾಗ ಸಂಯೋಜಕ ಜೋಸೆಫ್ ವರ್ಗೀಸ್, ಆಶಾರಾಣಿ ಪಾಟೀಲ್, ವೃಷಾಲಿ, ಶಿವಲೀಲಾ ಪೂಜಾರಿ ಹಾಗೂ ಚಟುವಟಿಕೆ ಸಂಯೋಜಕರಾದ ಅಕ್ಷತಾ ಕುಲಕರ್ಣಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕದ ಗತವೈಭವನ್ನು ಸಾರುವ ಕದಂಬ, ಹೊಯ್ಸಳ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ವಚನಕಾರರು ಇವರೆಲ್ಲರ ನಾಡ ಅಭಿಮಾನವನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ಪ್ರಸ್ತುತ ಪಡಿಸಿದರು. ನೃತ್ಯ ರೂಪಕದಲ್ಲಿ ಕರ್ನಾಟಕದ ಜನಪದ ಕಲೆಗಳಾದ ಯಕ್ಷಗಾನ, ಕಂಸಾಳೆ, ಡೊಳ್ಳು ಕುಣಿತ, ಹುಲಿ ಕುಣಿತ ಇವೆಲ್ಲವನ್ನು 180 ವಿದ್ಯಾರ್ಥಿಗಳ ಪ್ರದರ್ಶನ ವೀಕ್ಷಕರ ಮನರಂಜಿಸಿತು.
ವಿಶೇಷವಾಗಿ 12 ನೇ ಶತಮಾನದ ವಚನಕಾರರಾದ ಬಸವಣ್ಣ ಪಾತ್ರಧಾರಿಯಾಗಿ ಪೂಜ್ಯ ದೊಡ್ಡಪ್ಪ ಎಸ್. ಅಪ್ಪಾ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಳಾಗಿ ಮಹೇಶ್ವರಿ ಎಸ್. ಅಪ್ಪಾ ಆಕರ್ಷಕ ಮತ್ತು ಭಾವನಾತ್ಮಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಈ ಮುಂಚೆ, ಕನ್ನಡ ಭಾಷೆಯ ಕುರಿತು ಮಾತನಾಡಿದ ಗಣ್ಯರು,ಕನ್ನಡವನ್ನು ಕೇವಲ ಮಾತನಾಡುವುದರಿಂದ ಮಾತ್ರ ಕನ್ನಡಿಗರಾಗುವುದಿಲ್ಲ; ಕನ್ನಡದ ಸಂಸ್ಕೃತಿ, ಸಾಹಿತ್ಯ, ಇತಿಹಾಸ ಮತ್ತು ಜೀವನ ಮೌಲ್ಯಗಳನ್ನು ತಿಳಿದುಕೊಳ್ಳುವುದರಿಂದ ಕನ್ನಡದ ನಿಜವಾದ ಆತ್ಮವನ್ನು ಅರಿಯಲು ಸಾಧ್ಯ ಎಂದು ತಿಳಿಸಿದರು. ಕನ್ನಡ ಎಲ್ಲರೊಟ್ಟಿಗೆ, ಎಲ್ಲರೊಂದಿಗೆ ಬೆಳೆಯಲಿ; ಕನ್ನಡದ ಸಂಸ್ಕೃತಿ, ಸಾಹಿತ್ಯ ಮತ್ತು ಚಿಂತನೆ ವಿಶ್ವದಾದ್ಯಂತ ಪಸರಿಸಲಿ” ಎಂದು ಅಭಿಪ್ರಾಯಪಟ್ಟರು. ಪೆÇೀಷಕರ ಸಹಕಾರ ಮತ್ತು ಶಿಕ್ಷಕರ ಪರಿಶ್ರಮ ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಕಾರಣವೆಂದು ಎಲ್ಲರನ್ನು ಅಭಿನಂದಿಸಿದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅಪ್ಪಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶಂಕರಗೌಡ ಹೊಸಮನಿ ಕನ್ನಡದ ಸಂಸ್ಕೃತಿ, ಇತಿಹಾಸ, ಪರಂಪರೆ, ಸಾಹಿತ್ಯ ಹಾಗೂ ಮೌಲ್ಯಗಳನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಹೇಳುತ್ತಾ ಕರ್ನಾಟಕದ ಈ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಬಸವಣ್ಣನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಮಾನವೀಯ ಮೌಲ್ಯಗಳನ್ನು ಇಂದಿನ ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾಗಿದೆ; ಇಂತಹ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಮೂಲಕ ಅವರಲ್ಲಿ ಹೆಮ್ಮೆ ಮತ್ತು ಶಾಂತಿಯುತ ಸಹಬಾಳ್ವೆಯ ಮನೋಭಾವವನ್ನು ಬೆಳೆಸಬೇಕಾಗಿದ್ದು, ‘ಕರ್ನಾಟಕ ವೈಭವ’ ಅಂತಹದೇ ಒಂದು ಪ್ರಯತ್ನವಾಗಿದೆಯೆಂದು ತಿಳಿಸಿದರು.
ಕಾರ್ಯಕ್ರಮದನಿರೂಪಣೆಯನ್ನು ಸೃಜನ್ ಮತ್ತು ವೃಷಾಲಿ, ಸಾಂಸ್ಕೃತಿಕ ನಿರೂಪಣೆಯನ್ನು ಭೀಮಾಶಂಕರ ಮತ್ತು ತನಿಷ್ಕಾ ನಿರ್ವಹಿಸಿದರು. ಸ್ವಾಗತ ಭಾಷಣವನ್ನು ಅನನ್ಯ, ಅತಿಥಿ ಪರಿಚಯ ಆರಾಧ್ಯ, ವಂದನಾರ್ಪಣೆಯನ್ನು ಸಾನ್ನಿ ನೆರವೇರಿಸಿದರು. ಕರ್ನಾಟಕ ವೈಭವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ, ಉತ್ಸಾಹ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಕ್ಕೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಮತ್ತು ಶರಣಬಸವ ವಿಶ್ವವಿದ್ಯಾಲಯದ ಚಾನ್ಸಲರ್ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರು ವಿದ್ಯಾರ್ಥಿಗಳನ್ನು ಆಶೀರ್ವದಿಸಿ, ಅವರ ಪ್ರತಿಭೆ, ಕನ್ನಡಾಭಿಮಾನ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು.