
ತಾಳಿಕೋಟೆ: ಗ್ರಾಮ ಪಂಚಾಯಿತಿ ನೌಕರರ ವಿವಿಧ ಮೂಲಭೂತ ಹಾಗೂ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಪಂಚ ನೌಕರರ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ಮುಷ್ಕರಕ್ಕೆ ತಾಳಿಕೋಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪಂಚ ನೌಕರರು ಬೆಂಬಲ ನೀಡಿದ್ದು ಮುಷ್ಕರದಲ್ಲಿ ಪಾಲ್ಗೊಳ್ಳಲು ಕರ್ತವ್ಯದಿಂದ ತೆರಳಲು ಅನುಮತಿ ನಿಡಬೇಕೆಂದು ತಾಳಿಕೋಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೌಕರರು ಮನವಿ ಸಲ್ಲಿಸಿದ್ದಾರೆ. ದರು.
ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚ ನೌಕರರು ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆಡಳಿತ ಮಂಡಳಿಗೆ ಸಹಕರಿಸುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾರೆ. ಪಂಚ ನೌಕರರ ಶ್ರಮದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ. ಆದರೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಇದುವರೆಗೆ ಸಮರ್ಪಕ ವೇತನ ಹೆಚ್ಚಳ ಜಾರಿಯಾಗಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೇತನ ಹೆಚ್ಚಳ, ಸೇವಾ ಹಿರಿತನದ ವೇತನ, ಸರ್ಕಾರದಿಂದ ನೇರವಾಗಿ ವೇತನ ಪಾವತಿ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಮಂಜೂರು ಮಾಡುವುದು ಸೇರಿದಂತೆ ತಮ್ಮ ಮೂಲಭೂತ ಹಕ್ಕುಗಳು ಹಾಗೂ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ರಾಜ್ಯ ಮಟ್ಟದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಹಾಗೂ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ತಾಳಿಕೋಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪಂಚ ನೌಕರರು ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಿದ್ದೇವೆ ಮುಷ್ಕರದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕರ್ತವ್ಯದಿಂದ ತೆರಳಲು ಅನುಮತಿ ನೀಡುವಂತೆ ತಾಳಿಕೋಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೌಕರರು ಮನವಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿ ನೌಕರರು ಹಲವು ವರ್ಷಗಳಿಂದ ಕಡಿಮೆ ವೇತನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೇವಾ ಭದ್ರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಜನರ ದಿನನಿತ್ಯದ ಮೂಲಭೂತ ಅಗತ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ವಿವಿಧ ಪ್ರಮಾಣಪತ್ರಗಳು ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನೌಕರರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ತಮ್ಮ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ಈಡೇರಿಸಬೇಕು ಎಂದು ಅವರು ಮನವಿಯಲ್ಲಿ ನಮೂದಿಸಿ ಒತ್ತಾಯಿಸಿದ್ದಾರೆ.
ತಾಳಿಕೋಟೆ ತಾಲೂಕು ಪಂಚ ನೌಕರರ ಸಮಿತಿಯ ನೇತೃತ್ವದಲ್ಲಿ ವಿವಿಧ ವೃಂದಗಳ ನೌಕರರ ಸಂಘಗಳ ಪದಾಧಿಕಾರಿಗಳು ಈ ಮನವಿ ಸಲ್ಲಿಸಿದ್ದು, ಕರವಸೂಲಿಗಾರರ ವೃಂದ, ಜವಾನರ ವೃಂದ, ಸ್ವಚ್ಛತಾಗಾರರ ವೃಂದ ಸೇರಿದಂತೆ ಐದು ವೃಂದಗಳ ನೌಕರರ ಸಂಘಗಳಿಂದ ತಾಲೂಕು ಪಂಚ ನೌಕರರ ಸಮಿತಿ ರಚಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬೇಡಿಕೆಗಳು ಈಡೇರುವವರೆಗೆ ಹೋರಾಟ
ಸರ್ಕಾರ ಕೂಡಲೇ ಪಂಚ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ವರ್ಷಗಳಿಂದ ಗ್ರಾಮೀಣ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ನ್ಯಾಯಯುತ ವೇತನ, ಸೇವಾ ಭದ್ರತೆ ಹಾಗೂ ಅಗತ್ಯ ಹುದ್ದೆಗಳ ಮಂಜೂರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಾಳಿಕೋಟೆ ಮನವಿ ಪತ್ರದಲ್ಲಿ ನಮೂದಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಗ್ರಾಂಪಂ ನೌಕರರಿಗೆ ಬಾಹ್ಯ ಬೆಂಬಲ ಸೂಚಿಸಿದ ‘ಬಿ’ ಗ್ರೇಡ್ ಪಿಡಿಒ ಸಂಘ
ದಿನಾಂಕ 12/10/2026 ರಂದು ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳು ಮತ್ತು ಹೋರಾಟಕ್ಕೆ ಬೆಂಬಲ ಸೂಚಿಸಲು ಬಿ-ಗ್ರೇಡ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷರಾದ ಪಿ. ಬಿ. ಚನ್ನೂರ ಅವರು ಬಾಹ್ಯ ಬೆಂಬಲವನ್ನು ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಸಿಬ್ಬಂದಿಗಳಾದ ಟಿಸಿ ಮಾಂತೇಶ ಕಿಲಾರಟ್ಟಿ, ಟಿಎಂಐಎಸ್ ಬಿ. ಬಿ. ಪಾಸೋಡಿ ಹಾಗೂ ಡಿಇಒ ಸಂತೋಷ ನಾಯೋಡಿ ಅವರು ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಪಂಚಾಯತ್ ಸಿಬ್ಬಂದಿಗಳಾದ ಮಾಂತೇಶ ಬಿರಾದಾರ, ಡಿ. ಎಸ್. ಹಿರೇಮಠ, ಅಶೋಕ ನಾಡಿಕರ, ಬಸವರಾಜ ಮಸರಕಲ್, ವೀರೇಶ ಹಿರೇಮಠ, ಶರಣು ಕುಂಬಾರ, ಮಲ್ಲು ಇಂಗಳೇಶ್ವರ, ದಶರಥಗೌಡ ದೊಡ್ಡಮನಿ, ಬಸವರಾಜ ಉಪ್ಪಲದಿನ್ನಿ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.























