
ಕಲಬುರಗಿ,ಅ.9-ಜೇವರ್ಗಿ ಮತಕ್ಷೇತ್ರದ ಹರವಾಳ ಗ್ರಾಮದ ಸಮೀಪ ಭೀಮಾ ನದಿಗೆ ಅಡ್ಡಲಾಗಿ ಸುಮಾರು 130 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ-ಬಾಂದಾರ ಯೋಜನೆಯ ಕಾಮಗಾರಿಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಪರಿಶೀಲಿಸಿದರು.
ಕಾಮಗಾರಿಯ ಪ್ರಗತಿ, ತಾಂತ್ರಿಕ ಅಂಶಗಳು ಹಾಗೂ ಬಾಕಿ ಇರುವ ಕೆಲಸಗಳ ಕುರಿತು ಮಾಹಿತಿ ಪಡೆದ ಸಚಿವರು, ಯೋಜನೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.
368.60 ಮೀಟರ್ ಉದ್ದ ಹಾಗೂ 4 ಮೀಟರ್ ಎತ್ತರದ ಈ ಸೇತುವೆ-ಬಾಂದಾರವು ನೀರಿನ ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಸುಧಾರಿಸಲು ಹಾಗೂ ಹರವಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗಲಿದೆ.
“ನೀರಾವರಿ ಯೋಜನೆಗಳು ಕೇವಲ ನೀರು ಸಂಗ್ರಹಿಸುವ ಕಾಮಗಾರಿಗಳಾಗಿರಬಾರದು. ಕೃಷಿ, ಗ್ರಾಮೀಣ ಸಂಪರ್ಕ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಒಟ್ಟಾರೆ ಪ್ರಯೋಜನ ನೀಡಬೇಕು. ಹರವಾಳ ಸೇತುವೆ-ಬಾಂದಾರ ಯೋಜನೆಯಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರಿಗೆ ದೀರ್ಘಕಾಲಿಕ ಪ್ರಯೋಜನ ದೊರೆಯಲಿದೆ,” ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ಜೇವರ್ಗಿ ಹಾಗೂ ಅಫಜಲಪುರ ಭಾಗಗಳಲ್ಲಿ ನೀರಾವರಿ, ಸಂಪರ್ಕ ವ್ಯವಸ್ಥೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಲಾಗುತ್ತಿದೆ. ಜನರ ಅಗತ್ಯಗಳನ್ನು ಸ್ಥಳದಲ್ಲೇ ಅರಿತು, ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದರು.
ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
………………………………..
ಭೀಮಾ ನದಿಗೆ ಅಡ್ಡಲಾಗಿ 368.60 ಮೀಟರ್ ಉದ್ದ, 4 ಮೀಟರ್ ಎತ್ತರದ ಸೇತುವೆ-ಬಾಂದಾರ ನಿರ್ಮಾಣ
ನೀರಿನ ಸಂಗ್ರಹಣೆ, ನೀರಾವರಿ ಹಾಗೂ ಗ್ರಾಮಗಳ ಸಂಪರ್ಕಕ್ಕೆ ಯೋಜನೆಯಿಂದ ಬಹುಮುಖ ಪ್ರಯೋಜನ
ಗುಣಮಟ್ಟ ಕಾಪಾಡಿಕೊಂಡು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಭರವಸೆ























