Home ಜಿಲ್ಲೆ ಕಲಬುರಗಿ ಸುಲಿಗೆ, ದರೋಡೆ ಪ್ರಕರಣಗಳಲ್ಲಿನ 66 ಜನ ಆರೋಪಿಗಳ ಪರೇಡ್

ಸುಲಿಗೆ, ದರೋಡೆ ಪ್ರಕರಣಗಳಲ್ಲಿನ 66 ಜನ ಆರೋಪಿಗಳ ಪರೇಡ್

ಕಲಬುರಗಿ,ಅ.9-ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿ ಗುರುವಾರ ಸುಲಿಗೆ ಹಾಗೂ ದರೋಡೆ ಪ್ರಕರಣಗಳಲ್ಲಿನ ಆರೋಪಿಗಳ ಪರೇಡ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯ 10 ಪೊಲೀಸ್ ಠಾಣೆಗಳಿಂದ 66 ಜನ ಸುಲಿಗೆ ಹಾಗೂ ದರೋಡೆ ಪ್ರಕರಣಗಳಲ್ಲಿನ ಚಾಳಿಬಿದ್ದ ಆರೋಪಿತರನ್ನು ಪರೇಡ್‍ಗೆ ಹಾಜರು ಪಡಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 44 ಜನರ ವಿರುದ್ಧ ಪಿಎಆರ್ ಕ್ರಮ ಕೈಗೊಳ್ಳಲಾಗಿದ್ದು, 38 ಜನರ ವಿರುದ್ಧ ಬಾಂಡ್ ಓವರ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ಪರೇಡ್‍ಗೆ ಹಾಜರಾದ ಆರೋಪಿಗಳು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವಂತ ಅಪರಾಧಗಳಲ್ಲಿ ತೊಡಗಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.