
ಶಿವಮೊಗ್ಗ ಜೂ,೬-ದೇಶದ ರಕ್ಷಣಾ ಸಿದ್ದತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಿದ್ಧತೆಯ ಭಾಗವಾಗಿ, ಶಿವಮೊಗ್ಗ ನಗರದಲ್ಲಿ ವೈಮಾನಿಕ ದಾಳಿ ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಶುಕ್ರವಾರ ಸಂಜೆ ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ’ಮಾಕ್ ಡ್ರಿಲ್’ (ಅಣಕು ಪ್ರದರ್ಶನ) ಯಶಸ್ವಿಯಾಗಿ ಜರುಗಿತು.
೨೦೨೬ ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ನಾಗರೀಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ಕೇಂದ್ರ ಗೃಹ ಸಚಿವಾಲಯವು ಸೂಚನೆಯನ್ವಯ ಜಿಲ್ಲಾ ಮಟ್ಟದಲ್ಲಿ ಇಂದು ಈ ಪ್ರದರ್ಶನವನ್ನುಯಶಸ್ವಿಯಾಗಿ ಕೈಗೊಳ್ಳಲಾಯಿತು.
ಮಾಕ್ ಡ್ರಿಲ್ ಕಾರ್ಯಾಚರಣೆ ವಿವರ:
ಎರಡು ನಿಮಿಷಗಳ ಸೈರನ್ ಮೊಳಗಿಸುವಿಕೆ: ಬಹು ಮಹಡಿಕಟ್ಟಡ ಮತ್ತು ಶಾಲಾ ಸಮುಚ್ಷಯಕ್ಕೆ ವೈಮಾನಿಕ
ಅಣಕು ಪ್ರದರ್ಶನದ ಆರಂಭದಲ್ಲಿ ಶತ್ರುಗಳ ವಾಯುದಾಳಿಯ ಮುನ್ಸೂಚನೆ ನೀಡುವಂತೆ ‘ಕೋಡ್ ರೆಡ್’ ಎಚ್ಚರಿಕೆಯ ೨ ನಿಮಿಷಗಳ ಸೈರನ್ ಮೊಳಗಿಸಲಾಯಿತು. ತಕ್ಷಣವೇ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಪ್ರಕ್ರಿಯೆ ಆರಂಭವಾಯಿತು.
ರಕ್ಷಣಾ ಕಾರ್ಯಾಚರಣೆ ಮತ್ತು ಪ್ರಥಮ ಚಿಕಿತ್ಸೆ: ದಾಳಿಯಿಂದ ಕಟ್ಟಡಗಳು ಧರಾಶಾಯಿಯಾದಾಗ ಸಾರ್ವಜನಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು, ಅವಶೇಷಗಳಡಿ ಸಿಲುಕಿದವರನ್ನು ಹುಡುಕಿ ರಕ್ಷಿಸುವುದು ಹಾಗೂ ಗಾಯಾಳುಗಳಿಗೆ ತಕ್ಷಣವೇ ತಾತ್ಕಾಲಿಕ ವೈದ್ಯಕೀಯ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವ , ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸು, ನಂತರ ಸ್ಥಳ ಪರಿಶೀಲನೆ ಕೈಗೊಳ್ಳುವ, ಐಇಡಿ ಲಭ್ಯವಾಗಿದ್ದು, ಬಾಂಬ್ ಕಿಲ್ಲರ್ ನ್ನು ತೆಗೆದು ಸೇಫ್ ಡಿಸ್ ಪೋಸಬಲ್ ಏರಿಯಾ ಗೆ ತರಲಾದ ಹಾಗೂ ಬಿಡಿಎಸ್ ಅಧಿಕಾರಿಗಳುಮತ್ತು ಸೊಕೊ ತಂಡ ಕಾರ್ಯಾಚರಣೆ ಕುರಿತು ಉನ್ನತ ಅಧಿಕಾರಿಗಳಿಗೆ ವರದಿ ನೀಡಿದ ಹಾಗೂ ಉನ್ನತ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಆದೇಶಿದ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಬಸ್ ಹೈಜ್ಯಾಕ್ : ಅಪರಿಚಿತ ಸಶಸ್ತ್ರ ದುಷ್ಕರ್ಮಿಗಳು (ನಟಿಸಿದ ಸಿಬ್ಬಂದಿ) ನಿಯಂತ್ರಣಕ್ಕೆ ಪಡೆದು, ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂಬ ತುರ್ತು ಸಂದೇಶ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಿತು. ಸಂದೇಶ ತಲುಪಿದ ಕೆಲವೇ ನಿಮಿಷಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ಕಮಾಂಡೋ ಮಾದರಿಯ ಶಸ್ತ್ರಸಜ್ಜಿತ ಪಡೆ ಮತ್ತು ಶ್ವಾನ ದಳ ಸ್ಥಳಕ್ಕೆ ಧಾವಿಸಿತು.
ಇಡೀ ಬಸ್ ನಿಲ್ದಾಣದ ಆವರಣವನ್ನು ಸುತ್ತುವರಿದ ಭದ್ರತಾ ಸಿಬ್ಬಂದಿ, ತಕ್ಷಣವೇ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಿದರು. ದುಷ್ಕರ್ಮಿಗಳೊಂದಿಗೆ ಸಂಧಾನ ನಡೆಸುವ ನಾಟಕೀಯ ಸನ್ನಿವೇಶದ ನಡುವೆಯೇ, ಮತ್ತೊಂದೆಡೆ ಅತ್ಯಂತ ಜಾಣ್ಮೆಯಿಂದ ಬಸ್ಸಿನ ಹಿಂಬಾಗಿಲು ಮತ್ತು ಕಿಟಕಿಗಳ ಮೂಲಕ ಒಳನುಗ್ಗಿದ ವಿಶೇಷ ಕಮಾಂಡೋ ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಕೇವಲ ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳನ್ನು ಜರೆದು ಹಿಡಿದು, ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಯಾವುದೇ ಅಪಾಯವಿಲ್ಲದೆ ಅತ್ಯಂತ ಯಶಸ್ವಿಯಾಗಿ ರಕ್ಷಿಸಲಾಯಿತು.


























