
ಶಿವಮೊಗ್ಗ, ಜು.೧೮- ಶಿವಮೊಗ್ಗ ಮಹಾನಗರ ಪಾಲಿಕೆ ೬ ನೇ ವಾರ್ಡ್ ಗಾಡಿಕೊಪ್ಪದ ಪುರದಾಳು ಮುಖ್ಯ ರಸ್ತೆಯು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಜನ ವಾಹನ ಸಂಚಾರ ದುಸ್ತರವಾಗಿದೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
ಸದರಿ ರಸ್ತೆಯು ಜನವಸತಿ ಪ್ರದೇಶದಲ್ಲಿ ಹಾದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಹೊರವರ್ತುಲ ರಸ್ತೆಗಳನ್ನು ಸಂಪರ್ಕಿಸುತ್ತದೆ. ರಸ್ತೆ ಇಕ್ಕೆಲಗಳಲ್ಲಿ ಅಪಾರ್ಟ್ ‘ಮೆಂಟ್ ಗಳು, ಲೇಔಟ್ ಗಳು, ಶಿಕ್ಷಣ ಸಂಸ್ಥೆ, ವಾಣಿಜ್ಯ, ಕೈಗಾರಿಕಾ ಸಂಕೀರ್ಣಗಳಿವೆ.
ಬಸ್, ಲಾರಿ ಸೇರಿದಂತೆ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆ ಅವ್ಯವಸ್ಥೆಯಿಂದ ಸುಗಮ ವಾಹನ ಸಂಚಾರವೇ ಅಯೋಮಯವಾಗಿದೆ. ಗುಂಡಿ ಗೊಟರಿನ ಜೊತೆಗೆ ಧೂಳಿನ ಪ್ರಮಾಣವು ಹೆಚ್ಚಾಗಿದೆ. ಮಳೆಗಾಲದ ವೇಳೆಯಂತೂ ರಸ್ತೆ ದುಃಸ್ಥಿತಿ ಹೇಳತೀರದಾಗಿದೆ ಎಂದು ನಾಗರಿಕರು ದೂರುತ್ತಾರೆ.
ಕಳೆದ ಹಲವು ವರ್ಷಗಳಿಂದ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿಯವರೆಗೂ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ. ದಿನದಿಂದ ದಿನಕ್ಕೆ ರಸ್ತೆ ಹದಗೆಡುತ್ತಿದೆ. ನಮ್ಮಗಳ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
ತಕ್ಷಣವೇ ಸ್ಥಳೀಯ ಶಾಸಕರು ಹಾಗೂ ಮಹಾನಗರ ಪಾಲಿಕೆ ಆಡಳಿತವು ಗಾಡಿಕೊಪ್ಪದ ಪುರದಾಳು ಮುಖ್ಯ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿ, ಜನ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಠಾಣೆ, ಕಾಲೇಜು ಸ್ಥಾಪನೆಗೆ ಆಗ್ರಹ
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಶಿವಮೊಗ್ಗದ ಗಾಡಿಕೊಪ್ಪ ಪ್ರದೇಶವು ನಗರ ವ್ಯಾಪ್ತಿಯಲ್ಲಿ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಬಡಾವಣೆಗಳಲ್ಲೊಂದಾಗಿದೆ. ಗಾಡಿಕೊಪ್ಪ, ಆಲ್ಕೋಳ, ಕಾಶೀಪುರ, ಗೋಪಾಳಗೌಡ ಬಡಾವಣೆ, ಮಲ್ಲಿಗೇನಹಳ್ಳಿ, ಶ್ರೀರಾಂಪುರ, ಪುರದಾಳು ಸೇರಿದಂತೆ ಸುತ್ತಮುತ್ತಲಿನ ಬಡಾವಣೆ ಹಾಗೂ ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಗಾಡಿಕೊಪ್ಪದಲ್ಲಿ ಪೊಲೀಸ್ ಠಾಣೆಯ ಅಗತ್ಯವಿದೆ. ಹಾಗೆಯೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಪಿಯು ಕಾಲೇಜು ಆರಂಭಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದ್ಯ ಗಮನಹರಿಸಬೇಕು ಎಂಬುವುದು ಸ್ಥಳೀಯ ಪ್ರಜ್ಞಾವಂತ ನಾಗರಿಕರ ಅಗ್ರಹವಾಗಿದೆ.

































