Home ಸುದ್ದಿ ರಾಷ್ಟ್ರೀಯ ದೇವರ ನಾಡಲ್ಲಿ ಭಾರೀ ಮಳೆ, ಭೂಕುಸಿತಕ್ಕೆ ಮೂವರ ಬಲಿ

ದೇವರ ನಾಡಲ್ಲಿ ಭಾರೀ ಮಳೆ, ಭೂಕುಸಿತಕ್ಕೆ ಮೂವರ ಬಲಿ

ತಿರುವನಂತಪುರ, ಆ. ೧: ಕೇರಳದಾದ್ಯಂತ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.

ಮಳೆಯಿಂದಾಗಿ ಬೆಟ್ಟದ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದಿದೆ. ವಾಗಮನ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ವೈಕೋಮ್ ಮೂಲದ ಪ್ರಭಾಕರನ್ ನಾಯರ್ ಎಂಬುವವರ ಮನೆ ಧರಾಶಾಹಿಯಾಗಿದ್ದು, ಅವರು ಜೀವಂತ ಸಮಾಧಿಯಾಗಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಪೂಂಜಾರ್‌ನ ಪಯ್ಯನಿತೊಟ್ಟಂನಲ್ಲಿ ಸಂಭವಿಸಿದ ಮತ್ತೊಂದು ಘಟನೆಯಲ್ಲಿ ಜೋಸೆಫ್ ಎಂಬ ಯುವಕ ಮೃತಪಟ್ಟಿದ್ದು, ಆತನ ತಾಯಿ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಮೋಟಾರು ವಾಹನಗಳು ಹಾಗೂ ಮನೆಗಳು ಮಣ್ಣಿನ ಅಡಿಯಲ್ಲಿದ್ದು, ಸಂತ್ರಸ್ತರನ್ನು ಹೊರತೆಗೆಯಲು ರಕ್ಷಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಕೊಚ್ಚಿ-ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಭೂಕುಸಿತ ಉಂಟಾಗಿ ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಟ್ಟಪ್ಪನ-ವಾಜವರ ರಸ್ತೆ ಸಂಪೂರ್ಣ ಬಂದ್ ಆಗಿದೆ. ಅಲ್ಲದೆ, ಪುಲ್ಲಕಾಯಾರ್ ನದಿ ಉಕ್ಕಿ ಹರಿಯುತ್ತಿದ್ದು, ಕೊಕ್ಕಾಯಾರ್ ಕೆಳಹಂತದ ಸೇತುವೆ ಜಲಾವೃತಗೊಂಡಿದೆ. ಅಕ್ಕಪಕ್ಕದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಕೊಟ್ಟಾಯಂ ಜಿಲ್ಲೆಯ ಈರಟ್ಟುಪೆಟ್ಟ, ಕಂಜಿರಪಳ್ಳಿ, ಕೂಟ್ಟಿಕ್ಕಲ್ ಹಾಗೂ ಎರುಮೇಲಿ ಪ್ರದೇಶಗಳಲ್ಲಿ ಹಠಾತ್ ಜಲಾವೃತ ಉಂಟಾಗಿದ್ದು, ಜನಜೀವನ ತಸ್ತಬುಸ್ತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸಣ್ಣ ಜಲಾಶಯಗಳ ತೂಬುಗಳನ್ನು ತೆರೆಯಲು ಅಧಿಕಾರಿಗಳು ಸೂಚಿಸಿದ್ದಾರೆ.