
ನವದೆಹಲಿ, ಆ. ೧: ಜಂತರ್ ಮಂತರ್ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ತಮ್ಮನ್ನು ನಿಂದಿಸಿದ್ದ ಯುವಕರನ್ನು ಕ್ಷಮಿಸಿದ್ದೇನೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಿಕ್ಟಿಮ್ ಕಾರ್ಡ್ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೇ, ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ನಡೆದ ದೌರ್ಜನ್ಯ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಅನುಭವಿಸಿದ ಆಘಾತದ ಕುರಿತು ಪ್ರಧಾನಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.
ಪ್ರಧಾನಿ ಇನ್‌ಸ್ಟ್ರಾಗ್ರಾಮ್ ವಿಡಿಯೋಗಳ ಕುರಿತು ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಇವುಗಳನ್ನು ಇನ್ಸ್‌ಸ್ಟಾಗ್ರಾಂ ಸಭೆ ಎಂದು ಜರಿದಿದೆ. ಜೊತೆಗೆ ಇದು ಅತಿಯಾದ ಸ್ವಯಂ ವ್ಯಾಮೋಹವಾಗಿದೆ ಎಂದು ಟೀಕಿಸಿದೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕಳೆದ ರಾತ್ರಿ ಅತಿಯಾದ ಸ್ವಯಂ ವ್ಯಾಮೋಹದ ಕಾರ್ಯವನ್ನು ನೋಡಿದೆ.
ಪ್ರಧಾನಿ ನರೆಂದ್ರ ಮೋದಿ ಯುವಕರನ್ನು ಕ್ಷಮಿಸುವುದಾಗಿ ಹೇಳಿಕೊಂಡರು. ಇದು ನಮ್ಮ ಯುವಜನತೆ, ದೇಶಕ್ಕೆ ಅಪಮಾನವಾಗಿದೆ. ಸರ್ಕಾರದ ಅಡಿಯಲ್ಲಿ ಸಂಕಷ್ಟಕ್ಕೀಡಾಗಿ, ನ್ಯಾಯಯುತವಾಗಿ ಕ್ಷಮೆಯಾಚನೆಯನ್ನು ಒತ್ತಾಯಿಸುತ್ತಿರುವ ನಮ್ಮ ಯುವಜನರಿಗೆ ಮಾಡಿದ ಅವಮಾನವಾಗಿದೆ. ಪ್ರಧಾನಿ ಇನ್‌ಸ್ಟಾಗ್ರಾಮ್ ಸಭೆಗಳು ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಮೂಲಕ ಲಕ್ಷಾಂತರ ಯುವಕರಿಗೆ ಉಂಟಾದ ಆಘಾತಕ್ಕಾಗಿ ಪ್ರಧಾನಿ ಕ್ಷಮೆಯಾಚಿಸಬೇಕೆಂದು ಇಡೀ ದೇಶವೇ ಆಗ್ರಹಿಸುತ್ತಿದೆ ಎಂದರು.
ಮೋದಿ ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಅತ್ಯಂತ ಕಠಿಣ ಹಾಗೂ ದ್ವೇಷಪೂರಿತ ಟೀಕೆಗಳನ್ನು ಬಳಸುತ್ತಾರೆ. ಕೇವಲ ಸಾರ್ವಜನಿಕ ಭಾಷಣಗಳಲ್ಲಿ ಮಾತ್ರವಲ್ಲದೆ, ಸಂಸತ್ತಿನಲ್ಲೂ ಅವರನ್ನು ಅವಮಾನಿಸಿ ಪದೇ ಪದೇ ಸುಳ್ಳುಗಳನ್ನು ಹರಡುತ್ತಾರೆ. ಸಂಸತ್ತಿನ ಒಳಗೆ ಮತ್ತು ಹೊರಗೆ ಅಸಭ್ಯವಾಗಿ ನಿಂದಿಸುವವರ ಪಡೆಯನ್ನೇ ಕಳುಹಿಸುತ್ತಾರೆ. ಬಳಿಕ ಸಂಪೂರ್ಣ ರಕ್ಷಣೆ ನೀಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.
ಶುಕ್ರವಾರ ತಡರಾತ್ರಿ ವಿಡಿಯೋ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಹೆಣ್ಣುಮಕ್ಕಳು ಅಂತಹ ಭಾಷೆಯನ್ನು ಬಳಸಿದ್ದಾರೆ ಎಂದು ಪ್ರಧಾನಿ ವಿಷಾದಿಸಿದರು. ಸಮಾಜದಲ್ಲಿ ಚಾಲ್ತಿಯಲ್ಲಿರುವ ಸಮಸ್ಯೆ ಮತ್ತು ಆಕ್ರೋಶ ಅರ್ಥವಾಗುತ್ತದೆ. ಆದರೆ ಯುವಕರನ್ನು ಅಪ್ಪಿಕೊಂಡು ಅವರಿಗೆ ಸರಿಯಾದ ಹಾದಿಯಲ್ಲಿ ಮಾರ್ಗದರ್ಶನ ಮಾಡುವ ಸಮಯ ಇದಾಗಿದೆ. ನಿಂದನೆ ಯಾವ ಸಮಸ್ಯೆಗೂ ಪರಿಹಾರ ಅಲ್ಲ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ಇದು ಒಟ್ಟಾಗಿ ಕೆಲಸ ಮಾಡುವ ಸಮಯ. ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲ ಒಂದಾಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.






























