Home ಜಿಲ್ಲೆ ಶಿವಮೊಗ್ಗ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್

ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್

ಶಿವಮೊಗ್ಗ, ಜು.೧೮-ಗೃಹ ಲಕ್ಷ್ಮಿ ಯೋಜನೆಯ ೩೧ ನೇ ಕಂತು ಬಿಡುಗಡೆಯಾಗುತ್ತಿದ್ದು, ಇನ್ನೊಂದೆರಡು ದಿನಗಳಲ್ಲಿ ಫಲಾನುಭವಿಗಳಿಗೆ ಹಣ ಜಮಾಯಾಗಲಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ಧಾರೆ.


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದ ನಂತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವು ಯಶಸ್ವಿಯಾಗಿ ಮುನ್ನಡೆಯುತ್ತಿವೆ ಎಂದರು.


ಗೃಹಲಕ್ಷ್ಮಿ ಯೋಜನೆ: ಶಿವಮೊಗ್ಗ ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ೩೧ನೇ ಕಂತಿನ ಹಣ ಬಿಡುಗಡೆಯಾಗಿದ್ದು ಜಿಲ್ಲೆಯ ಒಟ್ಟು ೩,೭೯,೮೫೮ ಅರ್ಹ ಮಹಿಳಾ ಫಲಾನುಭವಿಗಳಿಗೆ ಈ ಕಂತಿನ ಲಾಭ ಸಿಗಲಿದೆ.


ಒಟ್ಟು ರೂ. ೭೫.೯೭ ಕೋಟಿ ಹಣ ಬಿಡುಗಡೆಯಾಗಿದೆ. ಪ್ರತಿಯೊಬ್ಬ ಫಲಾನುಭವಿಯ ಖಾತೆಗೆ ತಲಾ ೨,೦೦೦ ರೂ. ಹಣವು ಮುಂದಿನ ಒಂದೆರಡು ದಿನಗಳಲ್ಲಿ ನೇರವಾಗಿ ಜಮೆಯಾಗಲಿದೆ.


ಜಿಲ್ಲೆಯಲ್ಲಿ ಈವರೆಗೆ ಒಟ್ಟು ೩೦ ಕಂತುಗಳಲ್ಲಿ ಡಿ.ಬಿ.ಟಿ. ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಟ್ಟು ೩,೧೧೦.೪೮ ಕೋಟಿಗೂ ಅಧಿಕ ರೂಪಾಯಿ ಜಮೆಯಾಗಿದೆ.


ಮೃತರ ಖಾತೆಯಿಂದ ಹಣ ವಾಪಸ್: ಜಿಲ್ಲೆಯಲ್ಲಿ ಮರಣ ಹೊಂದಿದ ೯,೨೪೭ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ತಾಂತ್ರಿಕ ಕಾರಣಗಳಿಂದ ಅವರ ಖಾತೆಗೆ ಜಮೆಯಾಗಿದ್ದ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಈಗಾಗಲೇ ೩,೬೦೦ ಫಲಾನುಭವಿಗಳಿಂದ ೩,೭೯,೮೨,೦೦೦ ರೂ.ಗಳನ್ನು ಯಶಸ್ವಿಯಾಗಿ ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.


ಗೃಹಜ್ಯೋತಿ ಯೋಜನೆ-ಸಮೀಕ್ಷೆ: ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರ ಮಾಹಿತಿ ಪರಿಶೀಲನಾ ಕಾರ್ಯವು ಜುಲೈ ೧ ರಿಂದ ಆರಂಭವಾಗಿದೆ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.


ಮನೆ ಬಾಗಿಲಿಗೆ ಮೆಸ್ಕಾಂ ಸಿಬ್ಬಂದಿ: ಮೆಸ್ಕಾಂ ಮೀಟರ್ ರೀಡರ್‌ಗಳು ಮತ್ತು ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಫಲಾನುಭವಿಗಳು ಈ ಸಮೀಕ್ಷೆಗಾಗಿ ಮೆಸ್ಕಾಂ ಕಚೇರಿಗೆ ಅಲೆಯುವ ಅಗತ್ಯವಿಲ್ಲ.


ಉಚಿತ ವಿದ್ಯುತ್ ಸ್ಥಗಿತವಾಗಲ್ಲ: ಈ ಸಮೀಕ್ಷೆಯು ಕೇವಲ ಫಲಾನುಭವಿಗಳ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಯಾವುದೇ ಕಾರಣಕ್ಕೂ ಉಚಿತ ವಿದ್ಯುತ್ ಸೇವೆಯನ್ನು ಸ್ಥಗಿತಗೊಳಿಸುವುದಿಲ್ಲ.


ಜಿಲ್ಲೆಯಲ್ಲಿ ಯೋಜನೆಗೆ ನೋಂದಣಿಯಾಗಿರುವ ಒಟ್ಟು ೫,೦೯,೧೩೩ ಗೃಹಗಳಲ್ಲಿ ಈಗಾಗಲೇ ೧,೩೮,೫೬೬ ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ. ೨೯ ರಷ್ಟು ಪ್ರಗತಿ ಸಾಧಿಸಲಾಗಿದೆ. ಸಾರ್ವಜನಿಕರು ಸಿಬ್ಬಂದಿಗೆ ಅಗತ್ಯ ದಾಖಲೆ ನೀಡಿ ಸಹಕರಿಸುವಂತೆ ಕೋರಿದರು.


ಅನ್ನಭಾಗ್ಯ ಯೋಜನೆ: ರೋಗಿಗಳಿಗೆ ೧೫ ದಿನಗಳಲ್ಲಿ ಬಿಪಿಎಲ್ ಕಾರ್ಡ್
ತುರ್ತು ಆರೋಗ್ಯ ಸೇವೆಗಳ ಕಾರಣಕ್ಕಾಗಿ ಬಿ.ಪಿ.ಎಲ್. ಕಾರ್ಡ್ ಕೋರಿ ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ಸರ್ಕಾರ ಉತ್ತಮ ಅವಕಾಶ ನೀಡಿದೆ. ಅನಾರೋಗ್ಯ ಪೀಡಿತರಿಗೆ ಯಾವುದೇ ವಿಳಂಬವಿಲ್ಲದೆ ೧೫ ದಿನಗಳ ಒಳಗಾಗಿ ಕಾರ್ಡ್ ವಿತರಿಸುವಂತೆ ಸರ್ಕಾರವು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ ಎಂದು ಸಿ.ಎಸ್. ಚಂದ್ರಭೂಪಾಲ ಅವರು ತಿಳಿಸಿದರು.